Saturday, December 11, 2010ಅಭಿನಯ ಚತುರ.
--------------
ಹೊನ್ನಿನದ್ದದಾದರೆ
ಶೂಲವೋ,ತ್ರಿಶೂಲವೋ
ಯಾವುದಕ್ಕೂ ಸೈ..

ಬಂಗಾರದ್ದಾದರೆ
ಸರಪಳಿಯೊ,ಕೈಕೋಳವೋ
ಒತ್ತಾಯಕ್ಕೆ ಬೇಕಾದರೆ
ಎರಡೂ ಇರಲಿ...

ಪತ್ರಿಕೆ,ಬಾನುಲಿ
ಟಿವಿಯ ಕವರೇಜ್
ಸರಿಯಾಗಿದ್ದರೆ,
ಪ್ರವಚನ,ಸಂದರ್ಶನ
ಲೊಕೋದ್ಧಾರವೇ ನಮ್ಮ ಗುರಿ..

ಚಿನ್ನದ ಆಭರಣ
ಸಮರ್ಪಣೆ ಇದ್ದಲ್ಲಿ,
ನಡೆಯಲಿ ಉತ್ಸವ ಪರ್ವಕ್ಕೊಂದು..

ಮೋಹದ ಹೆಂಡತಿ
ಮನೆಯೊಳಗಿರಲು,
ಕಾವಿಯ ಬಣ್ಣ ಹೇಗಿದ್ದರೇನು..?
ಅಭಿನಯ ಚತುರನ
ದರ್ಭಾರಿನಲ್ಲಿ
ಪರಾಕ್..ಭೋ..ಪರಾಕ್!!
----------------

Sunday, October 24, 2010ರೂಪಾಂತರ
-----------

ಬೀಜದೊಳಗಿದ್ದೆನೋ?
ಗೊತ್ತಿಲ್ಲ..
ಬೀಜ ಲಯವಾಗಿ
ಮೊಳಕೆ ಚಿಗುರಾದೆ.

ಚಿಗುರೊಳಗಿದ್ದೆನೋ?
ಗೊತ್ತಿಲ್ಲ..
ಚಿಗುರು ಚಿರುಟಿ
ಗಿಡವಾಗಿ ಮೇಲೆದ್ದೆ.

ಮೇಲೆ..ಮೇಲೆ
ಒಂದಕ್ಕೆ ಎರಡಾಗಿ
ಎರಡು ನೂರಾಗಿ
ಸಾವಿರಾರು ಟಿಸಿಲೊಡೆದು
ಲಕ್ಷ ಲಕ್ಷ ಎಲೆ ಬೆಳೆದು.

ಉದುರಿ ಉದುರಿ
ಮೆತ್ತೆ ಬೆಳೆಯುತ್ತಾ
ಹೂವಾಗಿ ಅರಳಿನಿಂತೆ..
ಅರಳಿ ಮುದುಡಿದ್ದೇ..
ಕಾಯಾದೆ..

ಕಾಯ ಕಹಿ/ದೊರಗು
ರುಚಿ ಕಳೆದು....
ರುಚಿತುಂಬಿ ಹಣ್ಣಾದೆ,ಜಗದ ಕಣ್ಣಾದೆ.

ಉದುರಿ ಅಲ್ಲಿಯೇ ಕೊಳೆತು
ಬೀಜವಾದೆ..
ಕಾಯುತ್ತಿರುವೆ ಎಂದಿಗೋ
ನನ್ನ ವಾಯಿದೆ???
--------------

Friday, October 15, 2010
ಆರು ಚಕ್ರದ ಅಂದದರಮನೆ.
-----------------------
ಮತ್ತೆ ಕರೆಯಬೇಡ ಕಣೆ,ನೀನು ಕಾಮಿನಿ,
ಕಾಮನ ಅರಗಿಣಿ,
ಕಡೆಗಣ್ಣನೋಟದಲಿ ಕೆಣಕಿ, ನನ್ನಲ್ಲಿ
ಆರುತ್ತಿರುವ ಕಿಚ್ಚನ್ನು ಕೆದಕ ಬೇಡವೇ..

ನನ್ನೆದುರಿನ ಚಿನ್ನದ ಚಿಗರೆಯಾಗಿ
ಆಸೆಯ ಉರಿಗೆ ತಿದಿಯೂದಿ
ಭಾವ ಬದಲಾಗಿ,ಕ್ರೋಧ ಹುಟ್ಟಿ
ಕೋಪದ ಕೈಗೊಂಬೆಯಾಗಿಸ ಬೇಡ ಕಣೇ..

ನಿನ್ನಪಡೆಯುವ ಹರ ಸಾಹಸದ
ವೆಚ್ಚಕ್ಕೆ ಹೊನ್ನ ಕೂಡಿಡುವ
ಲೋಭಿಯಾಗಿಸಬೇಡವೇ...ಚಿನ್ನಾ..

ಮೋಹದ ಮಾಯಾ ಮುಸುಕನ್ನು ಮುಚ್ಚಿ,
ಮರೆಸುತ್ತ ಲೋಕದ ರೀತಿನೀತಿಯ
ಚೌಕಟ್ಟಿನಿಂದಾಚೆಗೆ ಸೆಳೆಯಬೇಡವೇ..
ಮೋಹನಾಂಗೀ..

ಆಮೋದ ಪ್ರಮೋದದ
ಹಳೆನೆನಪನುದ್ದೀಪಿಸಿ,
ಮದ ತುಂಬಿ,ಉನ್ಮತ್ತನನ್ನಾಗಿಸ ಬೇಡ
ಕಣೇ..ಮದಗಜಗಾಮಿನಿ.

ನಿನ್ನೆಗಳ ಮರೆಯುವ ಪ್ರಯತ್ನಕ್ಕೆ
ಮಾತ್ಸರ್ಯದ ಸವತಿಯಾಗಿ ಕಾಡಬೇಡವೇ..
ಕನಸಿನ ಕನಕಾಂಗಿ..
ಕಾಡಿ ನೂಕದಿರು ಮತ್ತೊಮ್ಮೆ ನನ್ನ
ಜೀವನದ ಜೋಕಾಲಿಗೆ...
ಅರಿವು ಮರೆಸುವ ಆರು ಚಕ್ರದ ಅಂದದರಮನೆಗೆ...
------------------------

Thursday, August 19, 2010

ಚಿಂತೆ
-----


ಯಾರಿಗೆ ಬೇಡ ಹೇಳಿ?

ನಾವು ಇಲ್ಲಿ ಜೀವಂತವಾಗಿಇದ್ದೇವೆ,
ಅಂತ ನಮಗೇ ನೆನಪಾಗುವುದಕ್ಕೆ ,
ನಮ್ಮ ಎಲ್ಲ ಬುದ್ದಿವಂತಿಕೆ,ಶ್ರಮ /ಕ್ರಮ ಗಳ,
ಸಮಯದ
ಸಾರ್ಥಕ ಉಪಯೋಗಕ್ಕೆ,
ಜೀವನದ ಸಾದನೆಯ ಸಮಾದಾನಕ್ಕೆ .

ಚಿಂತಿಸಿ- ಚಿಂತಿಸಿ,
ಚಿಂತೆಗಳ,ಚಿಂತಾಮಣಿ ಕಟ್ಟು
ತಲೆಯ ಮೇಲೆ ಹೊತ್ತು ನಿಟ್ಟುಸಿರು ಬಿಡುತ್ತಾ ,
ಮತ್ತೆ ಸಮಸ್ಯೆಗಳ ಬಿಡಿಸುತ್ತಾ ,
ನಮ್ಮ ಬೆನ್ನ ನಾವೇ ತಟ್ಟುತ್ತಾ
ಸಾದಿಸಿದ್ದೇನೆ ಎಂದು ಉಬ್ಬಿಕೊಳುದಕ್ಕೆ .

ಒತ್ತಡದ ಒತ್ತಿಟ್ಟಿಗೆಯ,ಗಂಟು ಗಂಟಿನ ಬಲೆಯ,
ಸುತ್ತಿಕೊಳುತ್ತ,ನೋವು ಹತಾಶೆಯ ಹಾವುಗೆಯ ಮೆಟ್ಟಿ
ವಿಲ ವಿಲನೆ ಒದ್ದಾಟ ಮಾಡಿ ಯಾದರೂ
ನಾವು ನುಗ್ಗಿದ ಸುಳಿಯಿಂದ ,
ನಾವೇ
ಮೇಲೆದ್ದು,ಮೀಸೆ ತಿರುವಿ ಕೊಳ್ಳೊದಿಕ್ಕೆ
ಸಕಲ ಸಂಸಾರ ಭಾರವ
ಸಂಬಾಳಿಸಿದ ಆದರ್ಶ ಗ್ರಹಿಣಿ ಆಗೋದಿಕ್ಕೆ.

ಚಿಂತೆ ಯಾರಿಗೆ ಬೇಡ?

ಪಕ್ಕದಲ್ಲಿರುವ ಕಲ್ಲು ಚಪ್ಪಡಿಯ ಎಳೆಎಳೆದು
ಎದೆಯೊಡ್ಡಿ ಎದೆ ಗೂಡಲ್ಲಿ ಬೆಂಕಿಯ ಬೇಗೆಯೆಬ್ಬಿಸಿ
ಬೇನೆ ಬೇಸರಿಕೆಯ ನರಳಾಟದಲ್ಲಿ
ನೊಂದು ಬೆಂದರೂ
ನೋವು ನರಳಾಟದಿಂದ ಮರಳಿ
ಹೊರಳಿ ಹೊರಗೆ ಜಿಗಿದು
ಆನಂದ ಹೊಂದೂದಕ್ಕೆ ,

ಚಿಂತೆ ಯಾಕೆ ಬೇಡ ಹೇಳಿ ?

ಚಿಂತೆ ಯಾಕೆ ಮಾಡತಿಯಾ ?................
ಕೇಳೋದು ಸುಲಬ!

ನಮಗೇ ಬೇಕಾದ್ದು ,ನಾವೇ ಮಾಡದೆ ಸುಮ್ಮನೆ ಇರುವುದು
ಹೇಗಪ್ಪಾ ?
ಕಷ್ಟ ಕಷ್ಟ !
----------
ನೀವೆಲ್ಲ
ಮತ್ತೆ ಇದನ್ನೊಮ್ಮೆ ಓದಿದರೆ ಚೆನ್ನಾಗಿತ್ತು ಅನಿಸ್ತು.ಅದಕ್ಕೇ ಪೋಸ್ಟ್ ಮಾಡಿದೆ.

Thursday, August 5, 2010ಪಾರವಿಲ್ಲದ ಪ್ರೀತಿ..
=========

ನೋಡಿಲ್ಲ ಇದುವರೆಗೆ ನಿನ್ನ
ಆದರೂ ನಿನ್ನ ಮೇಲೆ
ಅದೇಕೋ
ಅಪಾರ ಪ್ರೀತಿ.
(ನೊಡಿಲ್ಲದ ಕಾರಣದಿಂದ
ಅಂತೂ ಖಂಡಿತ ಅಲ್ಲ!)

ನಿನ್ನನರಿತವರಂತೆ
ಅವರು..
ಇವರು ಅಂದ ಮಾತಿಗೆ
ಬೆಲೆಕೊಟ್ಟು,
ಬೆಲೆಕಟ್ಟಲಾಗದ
ಅವರ ಸಂಗದಲ್ಲಿ
ನಿನ್ನ ಕಾಣುವ ನನ್ನ ಪ್ರಯತ್ನ..
ಹುಸಿಹೋಗಲಿಲ್ಲ.

ನಿನ್ನ ಅಂದ ಚಂದ,
ಗುಣಗಳ ವರ್ಣನೆ ಕೇಳುತ್ತ,ಕೇಳುತ್ತ..
ನಿನ್ನ ಪ್ರೀತಿಯ ಆಳದಲಿ
ಮೀಸಿಬಂದ ಅವರ ತನುಗಂಧ
ಆಘ್ರಾಣಿಸುತ್ತ...ಇದ್ದಂತೆ,
ಪಾರವಿಲ್ಲದ ನಿನ್ನೋಳಗೆ
ಒಂದಾಗುವ..
ತೀರದ ಬಯಕೆ.

ನಿನ್ನಲ್ಲಿ ಒಂದಾಗಿ,
ನನ್ನೊಳಗೆ ನೀನಾಗಿ
ನೀನೇನಾನಾಗಿ
ನಾನಿಲ್ಲದಾಗುವ ಬಯಕೆ..

ಇದು ಹುಚ್ಚಲ್ಲ.
ಎದೆಯೊಳಗೆ ಹುಟ್ಟಿ,
ನಖ ಶಿಖಾಂತ ಹಬ್ಬಿ,
ಈಗ
ನೆತ್ತಿ ಸೀಳಿ
ಜ್ವಲಿಸುವ ಕಿಚ್ಚು.

ಅರೆ! ಇದೇನು ಬಿಂಬವೇ?
ಅಲ್ಲ,
ನಾನೇ ನಿನ್ನ
ಪ್ರತಿಬಿಂಬವೇ??
ಹೇಗೋ......
ನಾನೇ ನಿನ್ನೊಳಗೋ
ನೀನೇ ನನ್ನೊಳಗೋ

ಒಟ್ಟಿನಲ್ಲಿ ಎಂದಿಗೂ..
ಹಾಗೇ ಇರಲಿ
ನಿನ್ನಲ್ಲಿದ್ದ
ಪಾರವಿಲ್ಲದ ಪ್ರೀತಿ,
----------------

Sunday, July 25, 2010ಮರೆವೆನೆ ಜೊತೆಯ?
--------------
ಕತ್ತಲ ಕಳೆಯಲು
ತಿಂಗಳ ಚಂದಿರ
ತಿಣುಕಾಡುವ
ಪರಿಯನು ಕಾಣುತ,

ಚುಕ್ಕಿಗಳಂದವು
ಬಾಂದಳದಣ್ಣ..
ನಾವಿರುವೆವು ಜೊತೆಗೆ.

ಜೊತೆಯಿದ್ದರೆ ಕೆಲಸವು ಹಗುರ
ಮನಸು ನಿರಾಳ.

ನಿಶಾದೇವಿಯ ಅಪ್ಪುತ,ತಬ್ಬುತ
ನಿದ್ದೆಗೆ ದೂಡುತ
ಚಂದಿರ ತಂದ
ಬೆಳದಿಂಗಳ ಚಂದ...

ಚುಕ್ಕಿಯ ಚಿಣ್ಣಗೆ
ಕಣ್ಣನು ಮಿಣುಕಿಸಿ
ಚೆಲ್ಲುತ ಬೆಳಕನು
ಚಂದಿರ ಅಂದ...

ಪ್ರೀತಿಯ ನೀಡಿ..ಜೋಡಿಸಿ ಕೈಯನು
ಜೊತೆಯಲಿ ನಿಂದಾ
ನಿಮ್ಮನು ಮೆರೆಸುವೆ ಆಗಸದೆತ್ತರ..
ಮರೆವೆನುಎಂತೂ..
ಮರೆಯೆನು ಎಂದೂ..

ಮರೆಯದೆ ಜತೆಯ
ಮೆರೆಯುವ ನಭದಿ
ಜೊತೆಯಲಿ ನಿಂದು
ಎಂದೆಂದೂ...
++++++

Thursday, July 15, 2010

Gregory Patrao :: Homestead Demolition

Sunday, July 4, 2010ಯಾರ ಕೃಪೆಯ,
ಯಾವಕಾಲದ ಮಹಲೋ?
--------------

ಸಾವಿರದ ಸಮಸ್ಯೆಗಳಿಗೆ,
ಪರಿಹಾರ
ಎಲ್ಲರಿಗೂ....ಎಲ್ಲ ಕಾಲಕ್ಕೂ ಎಲ್ಲೆಡೆಯೂ,
(ಕಾಲ ದೇಶಾತೀತವಾಗಿ)
ದೊರಕಿದ್ದರೆ....
ಇಲ್ಲೇ ಅಲ್ಲವೇ?

ಕಾಲ! ಅಹಾ,
ಅದೆಂತಹ ಕಲ್ಪನೆ!
ಪ್ರಕೃತಿಯೊಂದಿಗಿನ ಸಹಬಾಳ್ವೆಗಾಗಿ
ಹಗಲು ರಾತ್ರಿಯ ಚಕ್ರಕ್ಕೆ
ಎಣಿಕೆ ಬರೆಯುವ ಹುಚ್ಚಿನಲ್ಲಿ
ಕಟ್ಟಿಕೊಂಡ ಸುಂದರ ಮಹಲು!

ಇಲ್ಲಿ ಪಹರಿಗಳಿಲ್ಲ, ಒಡೆಯರೂ ಇಲ್ಲ.
ಗೊತ್ತಿಲ್ಲದ ಯಜಮಾನನ ಮಾಲಕತ್ವ ಒಪ್ಪಿ
ಸಾಗಿದೆ ಬದುಕು..ನಿರಾತಂಕ,ನಿರುಮ್ಮುಳ!

ಇಲ್ಲಿ ಬೀಸುವ ಗಾಳಿಗೆ,
ಬೆಳದಿಂಗಳಿನ ಸುಖ ನಿದ್ದೆಗೆ,
ಎಲ್ಲ ಮರೆಯುವ ಮರೆಸುವ
ಅದೆಂತಹ ಶಕ್ತಿ!

ಸಮಯದ ನಾಡಿ ಹಿಡಿದು
ಹೊತ್ತು ಹೊತ್ತಿಗೆ,
ಬೇಕಾದ ಎಲ್ಲವ...
ಬೇರಾರಿಗೂ ಇಲ್ಲವೆನ್ನುವಷ್ಟು ನೀಡಿ,
ನೋವ ನೀವುತ್ತ ಮನವ ಮುದಗೊಳಿಸಿ..ಮುದ್ದಿಸಿ,
ಶಕ್ತಿತುಂಬುವ
ಅದ್ಭುತ ಮಹಲು!

ಸವೆಸಲೇಬೇಕಾದ ಬದುಕಿಗೆ
ಸಾಸಿವೆಯಷ್ಟೂ ಕೊರತೆಯಾಗದಂತೆ...
ಅದೆಷ್ಟು ಲೆಕ್ಕಾಚಾರ..
ಯೋಚಿಸಬೇಕಾದ್ದಿಲ್ಲ..
ಒಡೆಯನಿಗೊಪ್ಪಿಸಿಕೊಂಡರಾಯಿತು!

ಇಷ್ಟು ನಿಶ್ಚಿಂತೆಯ
ಮನೆಯ ಮಡಿಲು ದೊರಕಿದ್ದು
ಯಾರ ಕೃಪೆಯೋ??
---------------

Wednesday, May 5, 2010

ಬಂಧಿ...
-------------------

ಅದೇಕೊ ಏನೋ
ಇಂದು ಬೆಳಿಗ್ಗೆ
ಅಯಾಚಿತವಾಗಿ,
ಅನಿರೀಕ್ಷಿತವಾಗಿ,
ಬೀಸಿಬಂದ ಗಾಳಿಯ ರಭಸಕ್ಕೆ,
ಶತಮಾನಗಳೆಷ್ಟೊ ತುಂಬಿದ
ನನ್ನ....ಪಂಜರ..
ಚೂರು ಚೂರಾಯಿತು.

ಬಟ್ಟ ಬಯಲಲ್ಲಿ ಬಿದ್ದೂ,
ಅದು ಹೇಗೋ ಸುಧಾರಿಸಿಕೊಂಡು
ಚಾಚಿದ ಮಾಡಿನ ತೊಲೆಯನ್ನಧರಿಸಿ,ಏರಿ
ಅಲ್ಲಿಯೇ
ಕುಳಿತಿದ್ದೇನೆ.

ಪಂಜರದಲ್ಲಿ ,ಹಸಿಬಟಾಣಿ
ಚಪ್ಪರಿಸಿ ತಿನ್ನುತ್ತಾ ಇರುವಾಗ,
ಅನಿಸುತ್ತಿತ್ತು..
ಎಂದಿಗೋ..
ಹೊರಗೆ..ಹಾರಿ..
ಮುಗಿಲನೇರಿ ಆಚೆ ಲೋಕದಾಚೆ
ಅನಂತದೆಡೆಗೆ ಗಮನ.......

ಆದರೆ,
ನಾನಿನ್ನೂ ಕುಳಿತಿರುವೆ ಯಾಕಿಲ್ಲಿ?
ಮರೆತೆ.....ಯಾಕೆ ಹುಟ್ಟುಗುಣ?
ಶತಮಾನದ ಪಂಜರದ ಅಮಲೋ?
ಹಸಿ ಬಟಾಣಿಯ ಮೋಹಕ ರುಚಿಯೋ?

ಅನಾಯಾಸವಾಗಿ ದೊರಕಿದ್ದು ಮೆದ್ದು,
ಸಹಕರಿಸುತ್ತಿಲ್ಲ ದೇಹ.

ಬಹುಶ:
ಕಳಚಿದರೆ ಮಾತ್ರ
ದೇಹ..
ಪಂಜರ ಕಳಚಿಕೊಂಡದ್ದು
ಅರಿವಾಗಿ
ರೆಕ್ಕೆ ಬಿಚ್ಚಿಕೊಂಡೀತೇನೋ...
ದಿಗಂತ..ಗಮನ
ಅನಂತಯಾನ ಲಭ್ಯವೇನೋ?
---------------------------
(ಚಿತ್ರ..ಅಂತರ್ಜಾಲ)

Wednesday, April 14, 2010


ಯಾವ ಮಾನ ಯಾರಿಗೋ?
------------------------

ಉರುಳುವ ಕಾಲಕ್ಕೆ
ವರುಷವೇನು? ನಿಮಿಷವೇನು?
ನಮಗೊಂದು ಲೆಕ್ಕಕ್ಕೆ ಲೆಕ್ಕ
ಸಂವತ್ಸರಕ್ಕೆ ,ವಾರಕ್ಕೆ
ತಿಥಿ,ಘಳಿಗೆ,ನಕ್ಷತ್ರ, ಜನಗಳಿಗೆ..

ತಿಂಗಳಿಗೊಂದು ಮಾನ
ಸೂರ್ಯಂಗೊಂದು ಮಾನ
ಸೂರ್ಯನ ಪಕ್ಷ!
ಚಂದ್ರನ ಪರ!!
ಯಾವ ಮಾನ ಯಾರಿಗೋ?

ಉರುಳುವ ಕಾಲಕ್ಕೆ...
ನರಳುವ ಮನುಜಗೆ
ವರುಷವೇನು? ನಿಮಿಷವೇನು??

ಸೌರಮಾನದಲ್ಲಿ
ಯುಗಾದಿ...
ಮೇಷದಲ್ಲಿ ವೇಷತೊಡುವ
ವಿಷುವಿನ
ಕಣಿಯೇ ಸಂಕ್ರಾಂತಿ..

ಪಂಚಭೂತಗಳ ನೆನಪಿಸುವ
ಪಂಚಲೊಹದ ಉರುಳಿ...
ತುಂಬಿಕೊಂಡ ನವಫಲಗಳ
ಕಂಡರೆ
"ವಿಷು ಕಣಿ"
ಶುಭವಂತೆ ವರುಷ ಪೂರ್ತಿ..

ಉರುಳುವ ಕಾಲ ಚಕ್ರದಲ್ಲಿ
ಆದಿಯೆಲ್ಲೋ? ಅಂತ್ಯವೆಲ್ಲೊ??.
ವೃತ್ತಕ್ಕೆ ಮೊದಲೇನು?ಕೊನೆಯೇನು??
ಸುಮ್ಮನೇ ಇರಲಾರದ
ನಮಗೊಂದು
ಲೆಕ್ಕ..
ಸೌರಮಾನ..ಚಾಂದ್ರಮಾನ..
ವಿಷು..ಯುಗಾದಿ.."ಕಣಿ"..ಪಂಚಾಂಗ ಶ್ರವಣ...
ಎಳೆ ಗೇರುಬೀಜದ ಪಾಯಸ...ಪಲ್ಯ!!

ಉರುಳವ ಕಾಲಕ್ಕೆ
ವರುಷವೇನು? ನಿಮಿಷವೇನು?
ಲೆಕ್ಕಕ್ಕೆ......... ಲೆಕ್ಕ
ಸಂವತ್ಸರಕ್ಕೆ ,ವಾರಕ್ಕೆ
ತಿಥಿ,ಘಳಿಗೆ,ನಕ್ಷತ್ರ, ಜನಗಳಿಗೆ..
-----------------------

Friday, March 26, 2010

ಹೇಳು ಮುದ್ದೂ...
---------

ಮನಸು ನನ್ನ
ಮುದ್ದಿನಕೂಸು...
ಗಮನ ತಪ್ಪಿದರೆ,ಅರೆಕ್ಷಣ
ಅತ್ತು ಅರಚಿ ರಂಪಾಟ..

ತೊದಲುತ್ತ,
ತೆವಳುತ್ತ ಬಂದು
ತೆಕ್ಕೆ ಬಿದ್ದು...
ಮೊಹಕ ನಗೆ ಬೀರಿ..
ಮೋಹದ "ಬಿರಿ" ಬಿಗಿದು..
ನಾನೋ ಅದರ ಕೈಯ ಆಟದಗೊಂಬೆ!!

ನಮ್ಮ ಕೂಸಲ್ಲವೇ?
"ಕೂಸು ಮರಿ" ಮಾಡಿ..
ಬೆನ್ನಲ್ಲಿ ಹೇರಿ..ತಲೆಯಲ್ಲಿ ಹೊತ್ತು..
ಆಟವಾಡದೆ ಇರಲಿ ಹೇಗೆ ನೀವೇ ಹೇಳಿ??

ಮಗು ಇನ್ನೂ ಚಿಕ್ಕದು..
ಮಕ್ಕಳಾಟವು ಚೆಂದ..ಮಗುವಿನ ನಡೆ ಇನ್ನೂ ಅಂದ
ತಿನ್ನಿಸಲು, ತಿರು ತಿರುಗಿ..
ಅದೋ ನೋಡು..ಬಾನಗೂಡು..ಹಾರುತಿದೆ ವಿಮಾನವು..
ಚಂದಮಾಮ ಚಕ್ಕುಲಿ ಮಾಮ..ಬಾ..ಬಾ..ಬಾ..
ಕಾಗೆಯೊಂದು ಹಾರಿಬಂದು..
ಕಾಗಣ್ಣಾ..ಗುಬ್ಬಕ್ಕಾ..ಬನ್ನಿ..ಬನ್ನಿ..
ಊಟವೇ ಮಾಡಿಲ್ಲ..ಮಗು ಬೇಕಾದ್ದು ತಿಂದಿಲ್ಲ..
ಎದೆ ಹಾಲೂ ಬತ್ತಿದೆಯಲ್ಲ !

ಹೀಗಾದರೆ ಹೇಗೆ ಮಗುವೇ?
ನೀನೆಂದು ಬೆಳೆವೆ.. ಹೇಳು?
ನನಗೆ ಊರುಗೊಲಾಗಿ
ಊರೆಲ್ಲ ಸುತ್ತಿಸಿ ನನ್ನ ಆಧಾರವಾಗಿ
ನೀನೆಂದು ಬರುವೆ ಹೇಳು?

ಮನಸು ನನ್ನ
ಮುದ್ದಿನ ಕೂಸು
ಅತ್ತರೂ ಚೆಂದ ನಕ್ಕರೂ ಚೆಂದ
"ಹೆತ್ತವರಿಗೆ ಹೇಗಿದ್ದರೂ ಚೆಂದ"

ಮನಸೇ ಓ ನನ್ನ
ಮುದ್ದಿನ ಕೂಸೇ..
ನಿಜಕ್ಕಾದರೂ..
ಆಟವಾಡಿಸುತ್ತಿರುವುದು
ನಾನು ನಿನ್ನನ್ನೇ??
ಅಲ್ಲ ನೀನು ನನ್ನನ್ನೇ??
ಹೇಳು ಮುದ್ದೂ...
-----------------

Monday, March 15, 2010ಯುಗಾದಿ ಯ
ಹೊಸಗಾದಿ
ತರಲೆಲ್ಲರ ಬಾಳಿಗೆ
ಹರುಷ,
ಸಂಭ್ರಮ.
ನೆನಸಾಗಲಿ
ಸವಿ ಕನಸುಗಳು.
ವಿಕೃತಿ
ಸಂವತ್ಸರದ ಹೆಸರಾಗುಳಿದು
ಸಂಸ್ಕೃತಿ
ನಮ್ಮೆಲ್ಲರ
ಉಸಿರಾಗಲಿ.
ಪ್ರೀತಿಯೆ
ಲೋಕದ
ಕಣ್ಣಾಗಲಿ.
ಜೀವನ ಹಣ್ಣಾಗಲಿ.
-----------------


Tuesday, March 9, 2010

ವಿದ್ಯೆ..ಕೈಚಾಚಿ ಪಡೆಯುವುದಕ್ಕಲ್ಲ!!
------------------------

ಕೈತಗ್ಗಿಸಿ ನಡುಬಗ್ಗಿಸಿ
ಪಡೆಯಲೆಂದು...
ಪಡೆಯಲಿಲ್ಲ "ವಿದ್ಯೆ".
"ಅವಿದ್ಯೆ"ಯ ಕೈಚಾಚಿ ತಳ್ಳಿ...
ಪಡೆಯ ಬಯಸಿದ್ದು
ಕೈತುಂಬ ನೀಡಬಲ್ಲ "ವಿದ್ಯೆ".

ತುಂಬ....ತುಂಬಿಕೊಳ್ಳಬೇಕೆ೦ದು
ಹಿಡಿದು ಹೊರಟೆ ದೊಡ್ಡ ಕೊಡ,
ಖಾಲಿಯಾಗದೆ..ಏನನ್ನದರೂ
ಹೇಗೆ ತುಂಬಲಿ?

ಅಬ್ಬ! ನೆನೆದರೆ
ಅದೆಷ್ಟು ಕಷ್ಟ..ಅಲ್ಲ,
"ಅಸೀಧಾರಾ ವೃತ".
"ಪಾಲಿಸಿದವಗೆ ಪಾವತಿಯಿಲ್ಲ"ವೆಂಬುದು
ಮಾತ್ರ ಇಲ್ಲಿ ಇಲ್ಲವೇ ಇಲ್ಲ.

ವಿಸ್ತಾರದ ತಿಳಿವಾದಾಗ..
ಈ ವಿದ್ಯಾಸಾಗರದ ಆಳಕ್ಕಿಳಿದೆ.
ಆಳಾಗುವುದು ತಪ್ಪಲಿ ಎಂದು.
ಸಾಗರದ ಅಲೆಗಳಡಿಯಲಿ
ನುತಿಸುತ ಮಿಂದು
ಬೆಳಕ ಕಂಡು ಬೆರಗುಗೊಂಡೆ!

"ಭವ..ಸಾಗರ"ವ ದಾಟಿ ಕೇವಲ
"ಭವಿ"ಯಾಗದೆ-ಅನುಭಾವಿ
ಆದವರೆ "ಗುರು"ವಾಗಿ ಒದಗಿ,
ಒಡೆದದ್ದಲ್ಲವೇ ಅವಿದ್ಯೆ?

ಅಚ್ಚರಿ!!!

ವಿನಯದಿಂದ "ವಿದ್ಯೆ"ಗಾಗಿ
ಬೆಳ್ಳಂಬೆಳಗ್ಗೆ ಬೇಗನೆ ಎಚ್ಚರಗೊಂಡದ್ದು..
ಮಾತ್ರ..ನೆನಪಿದೆ,
ತಗ್ಗಿ ಬಗ್ಗಿ ನವೆದು ನಡೆದು
"ಮೂರು ಬೆಳೆ"
ಪಡೆದದ್ದು..ಅರಿವಾಗಲೇ ಇಲ್ಲ.

ಅರೆ!
"ಅರಿವು" ಅರಿಯದೆ ಉಳಿದು..
ನಮಗೆ ನಾವೇ ಅರಿ ಯಾಗುವುದೇಕೆಂದು
ಅನ್ನ ರುಚಿಗಳ ಮರೆತು
ಗುರುವಿನಡಿಯಲಿ ಕುಳಿತು
ಗಳಿಸಿಕೊಂಡೆ "ವಿದ್ಯೆ".

...ಪಡೆದ ವಿದ್ಯೆ..ಕೈಚಾಚಿ ಪಡೆಯುವುದಕ್ಕಲ್ಲ!!!
--------------------------------------

Friday, March 5, 2010

ಪಯಣದ ಸುಖ!!

ನಿನ್ನಿಷ್ಟ ಏನಿದ್ದರೂ
ಸಾವು ಘಟಿಸುವ ತನಕ
ಬದುಕಲೇ ಬೇಕು
ಒದಗಿಬಂದದ್ದು
ಅನುಭವಿಸಲೇ ಬೇಕು.

ಹುಟ್ಟಿದ ಬಳಿಕ ಸಾವೇ
ಪಯಣದ ಕೊನೆ.
(ಇಚ್ಚಾಮರಣಿಗೂ ಕೊನೆಗೆ
ದೊರಕಿದ್ದು ಮರಣವೇ ತಾನೇ?)
ಅರಿವಾದರಿಷ್ಟು,...
ಇನ್ನು
ಆತಂಕಯಾಕೆ?

ಅತ್ತುಕರೆವ ಗೊಣಗಾಟ
ಚಿಂತೆಯ ಚಿತೆಯ ನರಳಾಟ
ಅಟ್ಟಿಬಿಡು ಆಚೆ.

ನಿನ್ನೊಳಗೇ ಇದೆಯಲ್ಲ,
"ಆನಂದದ ಅಮೃತಕಲಶ"
ಹೀರುತ್ತ ಖುಷಿಯ,
ಅನುಭವಿಸು ಪಯಣದ ಸುಖವ!
-------------------------


Saturday, February 27, 2010

...ಚರ!!

ಯಾವುದೂ,ಹೇಗೂ
ಸ್ಥಿರವಿರದ
ನನ್ನ ನಿನ್ನ ಜಗತ್ತಲ್ಲಿ
ಚಲಿಸದಂತೆ ಮನವ
ಮೊಡಿಮಾಡಿ
ಸ್ಥಿರವಾಗಿಸುವ ಪ್ರಯತ್ನ!!
ಅದ್ಯಾವ ಪುಣ್ಯಾತ್ಮ
ತುಂಬಿದನೊ ನಿನ್ನ ತಲೆಯಲ್ಲಿ?

ರಾತ್ರಿಯೂ ಹಗಲೂ
ನೀನೇ ಹೇಳಿಕೊಳ್ಳುವಂತೆ
ಮನಸಿನಒಳಗೂ (ಆಶ್ಚರ್ಯ)
ಹೊರಗೂ "ಅದೇ ಧ್ಯಾನ ವಂತೆ"
ಹೊಸಬಗೆಯ"ರೊಗವಂತೆ"..
ಹೇಗಾಯಿತು?ಹೀಗೇಕಾಯಿತು?

ಅಂತ ನನ್ನ ಕೇಳಿದರೆ
ಏನು ಹೇಳಲಿ ಗೆಳೆಯ?
ನನಗೊ
ಈ ರೋಗ ಹಿಡಿದು
ವರುಷವಾಯಿತು,ಇಪ್ಪತೈದು
ಕೊಟ್ಟಿಲ್ಲ ಯಾವ
ಹೊಸ ವೈದ್ಯನೂ,ಹಳೆರೋಗಿಯೂ
ಇನ್ನೂ ಇದಕ್ಕೆ ಮದ್ದು!!!

ಸ್ಥಿರಗೊಳಿಸುವ ಆಸೆ ನಿಲ್ಲಿಸಿ
ಈಗ
ಅನುಸರಿಸುತ್ತಿರುವೆ ಮನಸ
ಎಲ್ಲಿಗಿದರ ಪಯಣ?
ಹೇಗಿದರ ಪಯಣ?
ಯಾಕಿದರ ಪಯಣ?
ಯಾರಿದರ ಒಳಗಿರುವ ಯಜಮಾನ?
ಎನ್ನುವ "ಕೆಟ್ಟ ಕುತೂಹಲ"ದೊಂದಿಗೆ.

ಹೊಸ ಉಪಾಯ ದೊರೆತರೆ
ಗೆಳೆಯಾ..
ತಿಳಿಸೆನಗೆ
ಮರೆಯದೆ..ಮಹರಾಯ....
-----------------------

Wednesday, February 24, 2010


........ಆಹುತಿ!


ನನ್ನ ಬದುಕಿನ ಬಂಡಿಯ
ಹೀಗೇಕೆ ಓಡಿಸಿದೆ?
ಹೇ ವಿಧಿಯೇ
ಕರ್ಣಕುಂಡಲ ಧರಿಸಿಯೂ
ಚಕ್ರವರ್ತಿಯ ಕರ್ಣಾಭರಣವಾಗುವ ಯೋಗ
ಮಾತ್ರವಾಯಿತೇ ಎನಗೆ?

ಹುಟ್ಟಿನಿಂದಲೇ ಅಲೆಯ ತೊಯ್ದಾಟಕ್ಕೆ
ಸಿಲುಕಿದ "ರಾಧೇಯ"ನಾಗಿ ನಾನು,
ನನ್ನ ಬದುಕಿನುದ್ದಕ್ಕೂ
ಗಟ್ಟಿಯಾಗಿ ನೆಟ್ಟಗೆ ನಿಲ್ಲಲೇ ಇಲ್ಲವಲ್ಲ!!

.......ಸುತ್ತಲೂ ಮೆತ್ತನೆಯ ರೇಶಿಮೆಯ ದುಕೂಲವಿತ್ತು
ವಜ್ರಾಭರಣಗಳಿತ್ತು ಮುಚ್ಚಿದಪೆಟ್ಟಿಗೆಯ ಒಳಗೆ
ಅದರೆ ಅಮ್ಮಾ,.....
ನದೀತಟದಲ್ಲಿ ಮರಳಿನಾಟವ ಆಡುವ ಮಕ್ಕಳಂತೆ
ಆಡಿ ನನ್ನ ಪಡೆದು
"ಭಾರತದ" ಗಂಗೆಗೆ ದೂಡಿಬಿಟ್ಟ ನಿನ್ನಲ್ಲಿರವಷ್ಟಾದರೂ
ಕರುಣೆಯಿತ್ತೇ?
ಕೇಳಿದ್ದೆ ನಾನು...
ಜಗತ್ತಲ್ಲಿ ಕೆಟ್ಟಮಕ್ಕಳು ಹುಟ್ಟಬಹುದು
"ಕುಮಾತಾ ನ ಭವತಿ" ಅಂತ
ನೀನೇನಾಗಿಹೋದೆ ಕುಂತೀ
ಜಗತ್ತಿನ ಮೊತ್ತಮೊದಲ ಕೆಟ್ಟತಾಯಿ
ಎಂಬ ಬಿರುದು ಹೊತ್ತುಕೊಂಡಲ್ಲೇ ಕುಂತು ಬಿಟ್ಟೆಯಲ್ಲೇ!!!

ಸೂತಪುತ್ರ,ಅಧಿರಥನ ಮಗ,
ವಸುಷೇಣನಾದರೂ
ಪರಶುರಾಮರ ಮಾನಸಪುತ್ರನಾದರೂ
ನನ್ನ ಅಂಧಕಾರವನ್ನು ಕಳೆಯಬಲ್ಲ ವಿದ್ಯೆ
ದೊರೆಯದೇ ಹೊಯಿತೇ..

ಅಂಗರಾಜ್ಯದ ಅಧಿಪತಿ
ಆಗಿ ತಲೆಗೆ ಕಿರೀಟ ಬಂದರೂ
ಜನರ ಕಿವಿಗಳಿಗೆ ಪ್ರೀಯನಾಗಿ
"ಕರ್ಣ"ನಾದರೂ
ಕಿರೀಟಿಗೆ ಸಮನಾಗಲಿಲ್ಲವಲ್ಲ!

ಅಂಬೆ ಅಂಬಾಲಿಕೆಯರ
ಅಜ್ಜ ಭೀಷ್ಮ
ಹೊತ್ತುತಂದಂತೆ
ಆವಂತಿಯ ಚಂದ್ರಮತಿ, ಭಾನುಮತಿ,ಸುರಸೆಯರ
ಸುಯೋಧನನಿಗೆ ತಂದೊಪ್ಪಿಸಿ ರಾಜನಿಷ್ಠೆಯ ಮೆರೆದರೂ
ದೊರೆಯಮನ್ನಣೆ ದೊರೆತುದಷ್ಟೇ..ಬಿಡಿ

ಯುದ್ಧರಂಗದವರೆಗೂ ಬೆಂಬಿಡದೆ ಬಂದ ಬಿರುದು
"ಮಹಾರಥಿ"
"ದಾನಶೂರ ಕರ್ಣ" ಎನ್ನುವುದೇ ಮುಳುವಾಯಿತೇ ಎನಗೆ?

ಒಳಹೊಕ್ಕರೆ ಹೊರಬರಲರಿಯದ
ಚಕ್ರವ್ಯೂಹದಲಿ ಅಭಿಮನ್ಯುವ ತರಿದ
ಅಪವಾದ ಬಂದದ್ದು
ನಿಜವಾದರೂ.....
ನಿಜಕ್ಕಾದರೂ,,
ಆ ಚಕ್ರಿಯಲ್ಲವೇ
ಮಹಾಭಾರತದ ಅನೂಹ್ಯ
ಚಕ್ರವ್ಯೂಹವ ಹೆಣೆದದ್ದು!
ಈ ಕರ್ಣನ ಬದುಕಿಗೆ?

ಹಾ!!
ವಿಧಿಯ ವಿಡಂಬನೆಯೆ!!

ಕುರುಕುಲ ಸಂಜಾತ,ಸೂರ್ಯಪುತ್ರ...
ಪಾಂಡವರಲ್ಲಿ ಹಿರಿಯ ನೀನು
ಎಂದ ಗೊಲ್ಲನಲ್ಲವೇ ನನ್ನ ಕೊಂದದ್ದು?
ಕೆಟ್ಟತಾಯಾಗಿಯೂ,ಇದ್ದ ನಾಚಿಕೆ ಮಾನ ಮರ್ಯಾದೆಯೆಲ್ಲವ ಬಿಟ್ಟು
"ತೊಟ್ಟಂಬ ತೊಡದಿರು"ಎಂಬ ವಚನವ ಪಡೆದು,
ನೀನಲ್ಲವೇ ನನ್ನ ಕೊಂದದ್ದು?

ಹೇಳು ಹಸ್ತಿನೆಯರಸಿ,ಲೊಕಮಾತೆ!!!

ಸಾರಥಿಯ ಕೈಗೂಸಾಗಿ ಬೆಳೆದೂ
ಸಾರಥಿ ಇಲ್ಲದೆ,
ರಕ್ತ ಮಾಂಸದ ಕೆಸರಲ್ಲಿ ಹೂತು ಹೋದ
ರಥಗಾಲಿಯ ಬರಿಕೈಯಿಂದ,ಓರ್ವನೇ
(ಕವಚವ ದಾನವಿತ್ತು,)ಎತ್ತುತ್ತಿರುವಾಗ
ಯುದ್ಧ ನಿಯಮವ ಮುರಿದು
ಹೊಡಿ ಕರ್ಣನ ಎದೆಗೆ ಎಂದದ್ದು ಯಾವ ನ್ಯಾಯ ಹೇಳು?

ಕುಂತಿಯಿಂದ
ಕೃಷ್ಣನವರೇಗೆ
ಎಲ್ಲರೂ ಬಳಸಿ ಎಸೆದ
ಈ ಕರ್ಣನ ಬದುಕು
ಯಾಕೆ,ಯಾರಿಗೆ
..........ಆಹುತಿ ಹೇಳಿ...

---------------------------

Tuesday, February 9, 2010

ಬೇಕು ಕಣೆ ಇಂದು ನಿನ್ನಂಥವರೇ..
---------------------------


ಮಂಥರೆ
ನಿನ್ನಿಂದಾಗಿ ನಡೆದದ್ದೇನು ರಾಮಾಯಣ?

ಹೇಳು ಮಂಥರಾ,
ಯಾಕೆ ಹೊಸೆದೆ ಈ ರೀತಿ ಬತ್ತಿ?
ಮುದ್ದಿನ ರಾಣಿಯ ಅಃತಪುರದ ಅಂತರಂಗದಲ್ಲಿ?

ನೀನು ಹಿಂಡಿದ ತೊಟ್ಟು ಹುಳಿಯಿಂದಾದ್ದದೇನು?
ಹಿಡಿಯಬೇಕಾಯಿತೇ
ರಾಮ ಕಡೆಗೊಲು
ಎತ್ತಿ ಹಿಡಿಯಲು ನಡೆನುಡಿಯ
ಮೇಲ್ಪಂಕ್ತಿ ನವನೀತ!

ಅರಿವಿತ್ತೇ ನಿನಗೆ
ಅರಿವುಗೆಟ್ಟ ಮತಿಹೀನ ಮನಸ್ಸುಗಳ
ಮಡುಹಿ
ರಾಮ
ರಾಜ್ಯವ ಕಟ್ಟುವನೆಂದು?

ಹದಿನಾಲ್ಕು ವರುಶದಲಿ
ಹಾದಿತಪ್ಪಿದ ನಾಲ್ಕು ದಿಕ್ಕಿನ ಲೊಕದಲ್ಲಿ
ರಾಮ
ಬಾಣದ ರೀತಿ
ಮಾಡುವನು ಲಕ್ಷ್ಯಬೇಧವೆಂದು?

ಹೇಳು ಮಂಥರಾ,
ನಿನ್ನಿಂದಾಗಿ ನಡೆದದ್ದೇನು ರಾಮಾಯಣ?

ಕೇಕಯ ದಿಂದ ನಲಿನಲಿದು ಬಂದೆ
ಕೈಕೇಯಿಯ ಪಾದ ದಾಸಿಯಾಗಿ
ದಶರಥನ ಕಿರಿಯ ರಾಣಿಯ
ಹಿರಿಯ ದಾಸಿಯಾಗಿ.
ನಿನ್ನೊಳಗೆ ಅಂದೇ
ತುಂಬಿ ತಂದಿದ್ದಿಯೇನೇ
ಇಂಥ ಮಾತ್ಸರ್ಯದ ಮಾಯಾ ಮಡಿಕೆಯ!

ಆದರೆ ಮಂಥರಾ,
ಅಯೋಧ್ಯೆಯ ಅಗಸನಿಗೂ ನ್ಯಾಯ ಸಿಗುವ ಮೊದಲು
ನಡೆಯಿತು..ನೊಡು
ಭರತ
ಖಂಡದಲ್ಲೆಲ್ಲ
ಅನ್ಯಾಯ ಅನೀತಿಯ ಸಂಹಾರ?
ಅಹಲ್ಯೆ
ಶಬರಿ
ಯ ಉಧ್ಧಾರ!

ಮಂಥರೇ
ಬೇಕು ಕಣೆ ಇಂದು ನಿನ್ನಂಥವರೇ..

ನಮ್ಮ ಮನದ ವನವಾಸಕ್ಕೂ
ರಾವಣ ಮಾರೀಚ ಮಾಯಾಜಿಂಕೆಯ ಸಂಹಾರಕ್ಕೂ..
ಕೊನೆಗೆ ರಾಮ ರಾಜ್ಯದ ನಿರ್ಮಾಣಕ್ಕೂ..

ಮಾತ್ಸರ್ಯವೇ ಮೈಯಾದ
ಹಣ್ಣು ಹಣ್ಣು ಮುದುಕಿ..ನಿನಗೆ ಸಿಕ್ಕ
ಈ ಮರ್ಯಾದೆಯಿಂದಾಗಿಯೇ
ನನಗೆ ನಿನ್ನಲ್ಲಿ ಹೇಳಲಾಗದಷ್ಟು
ಮಾತ್ಸರ್ಯ..
ಮಂಥರಾ..
-------------

Thursday, February 4, 2010


ಗೆಳತೀ..
-----

ನೀನು ಏನೇಹೇಳು ಬದುಕನ್ನು
ಎಲ್ಲ ರಸಗಳೂ ಆಳುತ್ತವೆ.ಅಳೆದ ತೂಗುತ್ತವೆ.
ಅದ್ಭುತ ಕರುಣ ವೀರ ಶಾಂತ
ಭಯ ಭೀಭತ್ಸ ರೌದ್ರ ಹಾಸ್ಯ
ರಸಗಳ ತೂಗಿ ತೊನೆಯುವ
ಅಲೆಗಳುಯ್ಯಾಲೆಗಳು ಜೊಕಾಲಿಯಾಡುತ್ತವೆ.
ಆಡಲೇಬೇಕಾಗುತ್ತದೆ.

ಆದರೆ ಗೆಳತೀ,
ಈ ಶೃಂಗಾರ ರಸಗಳ ರಾಜ.
ವಿರಹಿಗಳಿಗೆ ಮಾತ್ರವಲ್ಲ,
ಧೀರರ ಸ್ಥಾಯೀ ಭಾವ
ಬದುಕಿನ ಆಸ್ಥಾನದಲ್ಲೊಂದು
ಶೃಂಗವಂತ.

ನಿನ್ನೆಗಳ ನೆನಪಲ್ಲಿ ಸಂತೊಷವೇಪಡು
ಆಸೆಯಿದ್ದರೆ ಕೊರಗು.
ನಾಳೆಗಳ ಕಲ್ಪನಾ ಸಾಮ್ರಾಜ್ಯದಲಿ
ವಿಹಾರ ಹೊರಡು
ಸುಖವೇ ಸಿಗಲಿ ಭಯವೇ ಭಾಧಿಸಲಿ
ಎಷ್ಟಾದರೂ ಇವೆಲ್ಲ
ಭೂತದ ನೆನಪು,ಭವಿಷ್ಯದ ಆಶಾದೀಪ.

ಗೆಳತೀ,
ನಿನ್ನ
ಅನುಭವಕ್ಕೆ,ಪ್ರಜ್ಞೆಯ ಅಳವಿಗೆ
ಏನಾದರೂ
ದೊರಕ ಬೇಕಿದ್ದರೆ...
ವರ್ತಮಾನದ ಬದುಕಿನ ಮೇಲೆ ಮಾತ್ರ ಗಮನವಿಡು.
ಮುಳುಗಿಯೇಳುತ್ತ
ಶೃಂಗಾರ ರಸಸಾಗರದಿ
ಅನುಭವಿಸು ಜೀವನವ
ಜೀನುಕಟ್ಟಿದ ಕುದುರೆಯ
ಅಬ್ಬರದ ಆನಂದವ
ತಳಮುಟ್ಟ ಹೀರಿ..

ಬಂದಕಾರ್ಯದಿ ತೊಡಗು
ಮನಸ ಮಣಿಸುತ್ತ..
ಕುಣಿದು ಕುಣಿಸುತ್ತ..
..ಗೆಳತೀ..
---------------

Friday, January 29, 2010

ಗೆಳೆಯಾ..
ನೋವೇ ದೊರೆತರು ನಿನಗೆ
ಮಾಡಿಕೊಳ್ಳ ಬೇಕಲ್ಲ ಅದನ್ನು ಮುತ್ತಿನ ನತ್ತು.
ಸುಖದ ಮುತ್ತು.
ಶರೀರಕ್ಕಾದರೆ ನೋವು ಮಾಯದೇ
ದಿನ,ದಿನಗಳಲ್ಲಿ,ತಿಂಗಳುಗಳಲ್ಲಿ.
ಒಂದಷ್ಟು ಸಮಯದಲ್ಲಿ
ಆಗದದು ಸ್ವಾತಿ ಹನಿ.
ದೊರೆಯದು ಕೆನೆಕಟ್ಟಿ ಮುತ್ತು!

ಮನದೊಳಗೆ ಇಳಿಯ ಬೇಕು ಸುಳಿ ಸುತ್ತಿ ನೋವು.

ಘಟನೆಗಳು,ಸಂಗತಿಗಳು
ಭಾವನೆಗಳ ಭಾವಲೋಕಕ್ಕೆ ಕನ್ನವಿಕ್ಕಿ
ಕೊರೆಯಲಾರಂಬಿಸಿದರೆ
ತಿರುಳ ಕೊರೆವ ಮರಿದುಂಬಿಗಳು.

ಕದತೆರೆಯದಿದ್ದರೆ
ಮನದೊಳಗೆ
ಕೆಂಪುಗಂಬಳಿ ಹಾಸಿ
ಕರೆಯದಿದ್ದರೆ ಒಳಗೆ
ಸುತ್ತಬೇಕಷ್ಟೆ ತಾನೆ ಹೊರಗೆ ಸುತ್ತು ಪೌಳಿಯಲ್ಲಿ?

ಸುತ್ತ ಸುತ್ತಲಿ ಬಿಡು ಅದರ ಜಾಡು ಅದೇಹಿಡಿದು.
ಎಂದರಾಗದು ಗೆಳೆಯಾ

ಮೊಹಗೊಂಡು ಅದರ ಸ್ವರ ಮಾಧುರ್ಯಕ್ಕೆ,ಮಧುರಾಲಾಪಕ್ಕೆ
ಶೃತಿ ಸೇರಿಸಿದೆಯಾದರೆ ಸಾಕು
ಮತ್ತೆ ಅದು ಲಕ್ಶ್ಮಣರೇಖೆ ದಾಟಿದ ಸನ್ಯಾಸಿಯೇ ಸರಿ.

ಸ್ವರ್ಣ ಲಂಕೆಯಲ್ಲೂ
ಶೋಧಿಸು ಮೂಲವನು
ಕಾರ್ಯ ಕಾರಣ ಕಾರಕವನು
ಆನಂದಿಸು ಮರಿದುಂಭಿಯ
ಮಧುರ ಮರುಳ ಮೊರೆತವನು

ಸಡಿಲಿಸು ಪಟ್ಟು, ಬಿಟ್ಟು ಬಿಡು
ನೋವು ತಿನ್ನ ಬೇಕೆನ್ನುವ ಹುಚ್ಚು

ಅನುಭವಿಸು
ಕುಣಿ,ಕುಣಿಸು
ಅದರ ತಾಳಕ್ಕೆ ನೀನು,ನಿನ್ನ ತಾಳಕ್ಕೆ ಅದು.
ಆಗ
ಅದೊ
ನೋವಿನಾಳದ
ಸಮುದ್ರದಲ್ಲೂ ಸುಖದ ಮತ್ತು
ಅಲ್ಲ ..ಮುತ್ತು!
ಮಾಡಿಕೊ ನತ್ತು!
------------------

Saturday, January 23, 2010


ತೃಪ್ತಿ,
ನಿನಗಾಗಿ ಹಂಬಲಿಸಿ ಕಾದಿರುವೆ
ನೀನೇಕಿನ್ನೂ ಮರೀಚಿಕೆಯಾಗಿರುವೆ ಹೇಳು?

ಹುಡುಗುತನದ ಹುಡುಗಾಟದ ಬಾಲ್ಯದಲ್ಲಿ
ಮನೆಯಂಗಳದ ಒಳಗೆ ಹೊರಗೆ
ಅಚ್ಚರಿಗಳ ಅರಿವಿನ ಆಚೆ ಈಚೆ ಹುಡುಕಿದ್ದು
ನಿನ್ನನ್ನೇ ಅಲ್ಲವೇನು?

ತೊಳೇರಿಸುವ ತಾರುಣ್ಯದ ತೊಟ್ಟಿಲಲ್ಲಿ
ನನ್ನೂರು ಪರವೂರು ಹತ್ತೂರುಗಳಲ್ಲಿ
ಕತ್ತಲಿನ ಗುಹೆಗಳಲ್ಲಿ,ಗೊಂಡಾರಣ್ಯದಲ್ಲಿ
ಅದರ್ಶಗಳ,ಗಾಜಿನರಮನೆಯ ಅಂತರ್ಯದ ನೆಲಮಾಳಿಗೆ ಯೊಳಗೆ
ತಡಕಾಡಿದ್ದು ನಿನ್ನ ಬೆಚ್ಚನೆಯ ಅಪ್ಪುಗೆಯ ಬಿಸುಪಲ್ಲಿ
ಕರಗಿ ನೀನೇಆಗಬೇಕಂದಲ್ಲವೇ ಹೇಳು?

ತೃಪ್ತಿ,
ಕನಸಿನ ಕನ್ಯೆಯೋ,ಅಂಬರದ ಅಪ್ಸರೆಯೋ.
ನೀನೆಲ್ಲಿ ಹೋದೆಯೇ,ಕನ್ನಡಿಯೊಳಗಿನ ಕಿನ್ನರಿ?
ತುಂಬು ಸಂಸಾರದ,ಸಡಗರದ,ಜಾತ್ರೆಯ ನಡುವೆ
ನಿನ್ನದೊಂದು ಕಡೆಗಣ್ಣನೊಟವೂ ಇಲ್ಲದಾಯ್ತೇ ಗೆಳತಿ?
ಆಸೆ,ಮಾತ್ಸರ್ಯಗಳೆಂಬ ಸವತಿಯ ಕಾಟಕ್ಕೆ,
ದುಡ್ಡಿನ ಗುಡ್ಡವನೊಟ್ಟುವ,ಬಿರು ಬಿಸಿಲ ಕಾಯಕಕ್ಕೆ ಹೆದರಿ ಬೆದರಿ
ಮಾಯವಾದೆಯೇನೇ?

ತೃಪ್ತಿ,
ಒಡಲ ಜೀವ ಚೈತನ್ಯವೇ
ಇನ್ನಾದರೂ ಬರಲಾರೆಯಾ,ನೆಮ್ಮದಿಯ ನೆರಳಾಗಿ,
ಭಾವದ ಗೆಳತಿಯಾಗಿ,ತಂಪೆರೆವ ತಾಯಾಗಿ,ತಣ್ಣನೆಯ ತನುವಾಗಿ?

ಹೊರಟಿಹೆನು ಇಂದು,ಹೊಗದೂರಿಗೆ ಒಂಟಿಯಾಗಿ...
ಅರೆ!
"ಒಬ್ಬಂಟಿಯಲ್ಲವೋ ಮೂಢ ನಾನಿರುವೆ ನಿನ್ನೊಳಗೆ,
ನಿನ್ನೆದೆಯ ಒಳಗೇ"

ತೃಪ್ತಿ,
ಹೊರಗೆ ಊರೆಲ್ಲ,ಅವರಿವರ ಬಳಿಯೆಲ್ಲ,ನೀನಿರುವೆಯೋ ಎಂದು
ಅರಸಿದ್ದು ಹುಸಿಯಾಯಿತೇ?...
ಅರಿವಾಯಿತೇ ಇಂದು!

ನಿನ್ನಿರವು ನನ್ನರಿವಾಗಿ,ಬಲವಾಗಿ ಹೆಪ್ಪುಗಟ್ಟುತ್ತಿದ್ದರೆ,ಹಾರಾಡಬಹುದಿತ್ತಲ್ಲವೇ
ಅನಂತ ಆಕಾಶದಲಿ ಜೋಡಿ ಹಕ್ಕಿಯಾಗಿ!?

ಇರಲಿ ಬಿಡು.ಈಗಲಾದರೂ ಬಂದೆಯಲ್ಲ,ಅಲ್ಲ
ಅರಿತೆನಲ್ಲ..ತೃಪ್ತಿ
ನೀನಿರುವೆ ಜೊತೆಯಾಗಿ,ಆನಂದ ಪಯಣದಲಿ
ಜೊತೆಗಾತಿಯಾಗಿ..
-----------------

Saturday, January 16, 2010
ನನ್ನ ಮಾಲಿಕನೇನೊ ನೀನು?

ಇದುವರೆಗೆ ಕಂಡಿಲ್ಲ,ನಿನ್ನ ನುಡಿ ಕೇಳಿಲ್ಲ!

ಇಲ್ಲಿ ಎಲ್ಲ
ಸ್ವಯಂಘೋಷಿತ ಮೇಸ್ತ್ರಿಗಳದ್ದೇ ಆಟ.

ಕೆಲಸ ಹೇಳುವುದೇನು? ಹೊರೆ ಹೊರಿಸುವುದೇನು?

ನನ್ನ ಪಾಡು
ಅಗಸನ ಅನುಚರನಿಗಿಂತಲೂ ಕಡೆಯಾಯಿತಲ್ಲ;

ಡೊಗ್ಗು ಸಲಾಮು ಹೊಡೆದು
ವಂಧಿಮಾಗಧನಾಗಿ ನಾನಿಲ್ಲಿ ಬಂಧಿ,
ನೀನೇಕೆ ಅಲ್ಲಿಯೇ ನಿಂದಿ?

ಬೇಡ ದೊರೆಯೇ ಬೇಡ..
ದೂರದೂರಿನ ಮಾಲಕನಾಗಿ
ನನ್ನ
ಅವರಿವರ ತಾಳಕ್ಕೆ
ಕುಣಿಸ ಬೇಡ.ನೀ ಅವಿತು ನೋಡಬೇಡ.

ಒಮ್ಮೆ ಬಂದು ನೋಡಿಲ್ಲಿ ನನ್ನ ಅವಸ್ಥೆ

ಈ ಬುದ್ಧಿವಂತ ಜನ ನಾಯಕರ,
ಮಠ ಮಂದಿರದ ಠಕ್ಕು ಸ್ವಾಮಿಗಳ,
ಬೈಠಕ್ಕು ಮಾಡುವ ಉಗ್ರ ದೇಶ ಪ್ರೇಮಿಗಳ,
ಅತ್ಯುಗ್ರ ಧರ್ಮಾಭಿಮಾನಿಗಳ,
ಹಿಂಡು ಹಿಂಡಾಗಿ ಬಂದು
ಎತ್ತೆತ್ತಲೋ ಒಯ್ಯುವ
ಅಭಿಮಾನಿ ದೇವತೆಗಳ,
ಕೈಯಲ್ಲಿ ಸಿಕ್ಕಿ ನರಳುತ್ತಿರುವೆ ತಂದೆಯೇ..

ಹಕ್ಕು ಕರ್ತವ್ಯಗಳ ಹೆಸರಲ್ಲಿ
ನೀತಿ ಅನೀತಿಗಳ ಬಲೆಯಲ್ಲಿ ಸುತ್ತಿ
ಒತ್ತಿ,
ಉಸಿರುಗಟ್ಟಿಸಿ, ಸಮಾಧಿಕಟ್ಟಿಸಿ,ಹುತಾತ್ಮನನ್ನಾಗಿಸಿ,
ವೀರಗಲ್ಲಲ್ಲಿ ಹೆಸರ ಬರೆಯುತ್ತಿರುವರಯ್ಯೋ
ದನಿಯೇ, ನನ್ನ ದನಿ ಕೇಳುತ್ತಿಲ್ಲವೇ?...

ಕಣ್ಣನಿತ್ತೂ ನೀ ನೋಡದ
ಕಿವಿಯಿತ್ತೂ ನೀ ಕೇಳದ
ನುಡಿಯಿತ್ತೂ ನೀ ನುಡಿಯದ
ಬಾಯಿಯನಿತ್ತೂ ನೀ ಮಾತನಾಡದ
ನೀನೂ ಒಬ್ಬ ಮಾಲಕನೇನೋ?

ದೂರದೂರಲ್ಲಿ ಕುಳಿತು
ನನ್ನ ಜೀತಕ್ಕಿಕ್ಕ ಬೇಡ.

ಬಿಡುಗಡೆಯ ಕರುಣಿಸೋ
ಇಲ್ಲಾ..
ನನ್ನನ್ನೇ
ನಿನ್ನಂತೆ ಒಡೆಯನನ್ನಾಗಿಸೋ..

ದೂರದೂರಿನ ಮಾಲೀಕನೇ
ಬಾರಯ್ಯ ತಂದೇ ನನ್ನ ಬಳಿಗೆ.
ಏನಯ್ಯ ತಂದೇ? ನನ್ನ ಬಾಳಿಗೆ?
ಎನ್ನುವಂತಾಗಿಸ ಬೇಡವೋ ದೊರೆಯೇ..

ನನ್ನ ಮಾಲೀಕ ನೀನೇ ಏನೋ???
-------------

Wednesday, January 13, 2010


ಮೊಲ ಮತ್ತು ಆಮೆ
--------------


ಅನಿರೀಕ್ಷಿತವಾಗಿ
ತುಂಬ ಸಮಯದಿಂದ ನಿರೀಕ್ಷಿಸಿದ್ದ
ಆಮೆ
ಒಂದು ಸಿಕ್ಕಿತು.
ಸಿಹಿ ನೀರಿನ ಬಾವಿಯಲ್ಲೇ ಇತ್ತೋ?
ಪಾರವಿಲ್ಲದ ಸಮುದ್ರದಿಂದ ಬಂತೋ?
ಅಂತೂ ಬಂದ
ಆಮೆ
ಈಗ ಮನೆಯೊಳಗೇ ಮನೆ ಮಾಡಿದೆ.

ಆಮೆ
ನಡಿಗೆ ಎಂಥ ಚಂದ!
ಒಂದೊಂದೇ ಪುಟ್ಟ ಪುಟ್ಟ ಕಾಲನ್ನು ಊರಿ,
ನಿಧಾನಕ್ಕೆ ತಲೆ ಹೊರಗೆ ಹಾಕಿ,ಮೇಲೆ ಎತ್ತಿ,ಅಕ್ಕ ಪಕ್ಕ ನೋಡಿ,ಕಣ್ಣು ಹೊರಳಿಸಿ,
ಮುಂದೆ ಮುಂದೆ ಹೋಗುವ ಅಂದವೇ ಅಂದ.

ತಿನ್ನುವ,ಮೂಸುವ,ಮುಟ್ಟುವ.ಕೇಳುವ,ನೋಡುವ,
ಎಲ್ಲವೂ ಬೇಕು ಇದಕ್ಕೆ!
ಎಷ್ಟು ಬೇಕೆಂದರೆ ಇನ್ನೂರು ವರ್ಷ..
ಬದುಕುತ್ತಂತೆ...
ಅದಕ್ಕೇ
ಆಮೆ
ಎಲ್ಲರಿಗೂ ಇಷ್ಟ.

ಭೂಮಿಭಾರ ಹೊರುವಷ್ಟು ಗಟ್ಟಿ ಚಿಪ್ಪಲ್ಲಿ ನಕ್ಷತ್ರ ಇದ್ದರೆ
ಜಗತ್ತಿನಲ್ಲೆಲ್ಲಾ ಭಾರೀ ಬೆಲೆಯಂತೆ.
ಹೊರಗಿನ ಗಟ್ಟಿಯಷ್ಟೇ ಒಳಗೆ ಮೆತ್ತಗೆ ನೋಡು.
ಅದಕ್ಕೇ ಮನುಷ್ಯನಿಗೆ ನೀನೆಂದರೆ ಅಕ್ಕರೆ.

ಮುಂದೆ ಮುಂದೆ ಓಡಿದ ಮೊಲ,
ಸುಸ್ತಾಗಿ ಮಲಗುವುದು ಖಂಡಿತ.
ಕೊನೆಗೂ ಜಯ ನಿನಗೇ.
ಅದಕ್ಕೇ
ಆಮೆ
ನೀನಾಗು ನಮ್ಮೆಲ್ಲರ ಸಂಗಾತಿ.
ಜೊತೆ, ಜೊತೆಯಲ್ಲೇ
ಅನುಭವಿಸುತ್ತಾ..ಬದುಕನ್ನು ಪೂರ್ತಿ ಆನಂದಿಸೋಣ.
ಅವಸರದ,ವೇಗಿ,ಸುಂದರಿ ಆದರೂ
ಮೊಲವನ್ನು
ಕಳಿಸೋಣ, ದೂ....ರ. ಕಾಡಿಗೆ.
ಆಮೆ
ಇರಲಿ ನಾಡಿಗೆ.
------------

Wednesday, January 6, 2010


ನೆಮ್ಮದಿ..ಬೇಕಿದ್ರೆ...
-----------------


ನಿಜಕ್ಕೂ ಅವರಿಗೆ ನನ್ನ ಬಗ್ಗೆ ಪ್ರೀತಿಇದೆಯಾ?
ಇವರಿಗೆ ತುಂಬಾ ಮತ್ಸರಪ್ಪಾ..
ಅವನು ನಿಜವಾಗಿ ನನ್ನ ಕೆಲಸ ಮೆಚ್ಚಿ ಹೇಳಿದ ಮಾತಲ್ಲ ಇದು.
ಅವನಿಗೆ ಖಂಡಿತ ನನ್ನ ಬಗ್ಗೆ ಒಳಗೊಳಗೇ ಅಸಮಧಾನ.ಎದುರಿಗೆ ತೋರಿಸಿಕೊಳ್ಳೊದಿಲ್ಲ ಅಸ್ಟೇ..
ನಮ್ಮನ್ನೇ ಗಮನಿಸುತ್ತಾ ಇರ್ತಾರೆ..
ನನಗೆ ತುಂಬಾ ಗರ್ವ,ಜಂಬ ಅಂತ ಗ್ರಹಿಸಿದ್ದಾನೆ/ಳೆ.
ಇದೆಲ್ಲಾ ಎದೆಯಾಳದ ಮಾತ?
ಹೀಗೆ...
ನಾವು ಇನ್ನೊಬ್ಬರು ನಮ್ಮ ಬಗ್ಗೆ ಏನು ಯೋಚಿಸುತ್ತಿರಬಹುದು ಅಂತ ಯೋಚಿಸುವುದು ಎಷ್ಟರಮಟ್ಟಿಗೆ ಸರಿ?
ಅಲ್ಲಾ..ಇನ್ನೊಬ್ಬರ ಮನಸ್ಸಿನಲ್ಲಿ ಏನಿರಬಹುದು?
ಅವನ/ಳ ಯೋಚನೆ ಹೀಗೆಇರುತ್ತೆ ಅಂತ ನಾವು ಹೇಗೆ ಕಂಡುಕೊಳುತ್ತೇವೆ?
ನಾವು ನಮ್ಮನಮ್ಮಲ್ಲೇ ತೀರ್ಮಾನಕ್ಕೆ ಬರುವುದು ತಪ್ಪಲ್ವೇ?
ಇನ್ನೊಬ್ಬರು ಏನು ಯೋಚಿಸ್ತಿರಬಹುದು ಅನ್ನೊ ಯೋಚನೆಯನ್ನು ನಾವು ಮಾಡದಿದ್ರೆ..ಬಹುಶಃ ನಮಗೆ ನೆಮ್ಮದಿ.ಅಲ್ವೇ?
------------------------------

ಇದೇನು ಕವನವಾ,ಗದ್ಯಬರೆಹವೇ ಅಂತ ಯೋಚಿಸಬೇಡಿ.ವಿಷಯದ ಬಗ್ಗೆ ಗಮನ ಹರಿಸಿ.
ನನ್ನ ಮನಸಿಗೆ ಅನಿಸಿದ್ದು.ಬರೆಹಕ್ಕೆ ಇಳಿದಿದ್ದು ಹೀಗೆ..ನಿಮ್ಮಲ್ಲಿ ಹಂಚಿಕೊಂಡಿದ್ದೇನೆ.

Sunday, January 3, 2010


"ಮಾತು" ನಮ್ಮ ಪ್ರೀತಿಯ ಕಂದ..
------------------

ನಮ್ಮ ಪ್ರೀತಿಯ ಮಗು,ಎಲ್ಲರಂತೆಯೇ
ಮುದ್ದು ಮುದ್ದಾದ,ಮುದ್ದು ಮಗು.


ಕವುಚಿ,ಅಂಬೆಗಾಲಿಕ್ಕಿ,ಹಿಂದೆ ಹಿಂದೆ ಸರಿದು,ಕುಳಿತು
ತ್ತ..ತ್ತಾ..ಅ..ಆ..ಅಮ್ಮಾ ಅಪ್ಪಾ ಎನ್ನುತ್ತಾ ಎದ್ದು
ಪುಟು ಪುಟು..ಹೆಜ್ಜೆ ಹಾಕುತ್ತ ನಡೆದಾಗ,
ಸಂತಸಪಟ್ಟು,ಪೊಟೊ ತೆಗೆದು ಸಂಭ್ರಮಿಸಿದ್ದೇನೆ.

ಆಟ ಪಾಟ,ಶಾಲೆ ಮುಗಿಸಿ,
ಎಲ್ಲ ಬೇಕುಗಳ ಆಸೆಪಟ್ಟು,
ಹಟಹಿಡಿದು,ಅತ್ತು..ಪಡೆದು
ಸಂತಸಪಟ್ಟು ..ಪಟ್ಟು,ಸುಸ್ತಾಗಿದೆ ಈಗ.

ಮಾತೆಂಬ,
ನನ್ನ ಮತ್ತಿನ ಮಗುವೇ,
ಮಲಗಮ್ಮ ಮಲಗು...
ಮಲಗಪ್ಪ ಮಲಗು..
ರಾತ್ರಿಯಾಯಿತು ಕಂದ..
ಸಾಕು ಇಂದಿಗೆ,
ಎದ್ದರೆ ನಾಳೆ ಮತ್ತೆ ಶುರುಹಚ್ಚು...

ಮಲಗು,
ಮಾತೇ..ನನ್ನ ಮುದ್ದಿನ ಮಗುವೇ..
ಮನೆಯ ಮಾಳಿಗೆಯಲ್ಲಿ ಸದ್ದಡಗಿಹೊಗಲಿ...
ಜಾರಿಕೊ..ಕನಸಿನ ಲೊಕಕ್ಕೆ ಕಂದಾ...
ಸಾಕಿಂದಿಗೆ ಸಾಕು..
ರಾತ್ರಿಯಾಯಿತು ಕಂದಾ..
-------------------------

Saturday, January 2, 2010
ಸುಮ್ ಸುಮ್ನೇ ಎಬ್ಬಿಸಿದ್ದಾರೆ ಗುಲ್ಲು!
-----------------------------


ಹೇಳ್ತಾರೆ
..ಹೇಳ್ತಾರೆ..ಸುಮ್ನೇ,
ಸುಮ್ ಸುಮ್ನೇ..ಕಿಸಬಾಯಿ ದಾಸನ೦ತೆ.

ಬಯಸಿದ್ದೆಲ್ಲ ದೊರಕುವುದಿಲ್ಲ,ದೊರಕಿದ್ದೆಲ್ಲ ಬಯಸಿದ್ದಾಗಿರುವುದಿಲ್ಲ!
ಸುಳ್ಳು..ಸ್ವಾಮೀ ಸುಳ್ಳು.
ಸುಮ್ ಸುಮ್ನೇ ಎಬ್ಬಿಸಿದ್ದಾರೆ ಗುಲ್ಲು!

ಬುದ್ದಿ ತಿಳಿದಾಗಿನಿ೦ದ....ಯೊಚಿಸಿ ನೊಡಿ..
ನೀವು ನೆನೆಸಿದ್ದು..ಆಸೆ ಪಟ್ಟಿದ್ದು,
ಆಗಿಲ್ಲವೇನು ನನಸು?

ಹೈಸ್ಕೂಲು ಮುಗಿದರೆ ಸಾಕು,ಶಿಕ್ಶೆ-ಹೊಮ್ವರ್ಕ್,
ಬಿಟ್ಟು ಯೂನಿಫಾರ್ಮ್,ಅರಾಮ ಕಾಲೇಜು,ಹೇಳೊಲ್ಲ ಯಾರೂ,
ಓದು,ಬರಿ,ಬಾಯಿಪಾಟ,ಗೊಣಗಾಟ.ಆನ೦ದದಿ೦ದ ಕಳೆಯಲಿಲ್ಲವೇ
ಐದಾರುವರ್ಷ..ಜೀವನದ ಸುವರ್ಣಯುಗ!

ದುಡಿಮೆ ಆರ೦ಭಿಸಿದರೆ ಸಾಕು.ವೆಚ್ಚಕ್ಕೆ ಹೊನ್ನು,ಬೆಚ್ಚಕ್ಕೆ ಹೆಣ್ಣು,
ತಾರುಣ್ಯದ ಆಟ,ಸ್ನೇಹಿತರ ಕೂಟ...
ಇಚ್ಚೆಯರಿತು ಬಾಳುವ ಗ೦ಡು,ಹೆಣ್ಣಿನ
ನಮ್ಮಸ೦ಸಾರ...ಆಗಿಲ್ಲವೇ ಆನ೦ದ ಸಾಗರ?

ಸಾಲ ಮಾಡಿ ಕಟ್ಟಿದ ಮನೆಯಾದರೂ,ಉರಿದಿಲ್ಲವೇ ಹೊಟ್ಟೆ,ಅಕ್ಕಪಕ್ಕ ದವರಿಗೆ?
ಸಾಲಕ್ಕೊ,ಶ್ರಾಧ್ಧಕ್ಕೋ ಅ೦ತ ತಮಾಷೆ ಮಾಡುತ್ತಾ,ಪಡೆದ ಮಕ್ಕಳೆರಡೂ,
ಬದುಕಿನ ಪಯಣಕ್ಕೆ ಪಡೆಯಲಿಲ್ಲವೇ ಗಟ್ಟಿ ರೆಕ್ಕೆ!
ಜೀವನದ ಪಯಣದಲ್ಲಿ ಹೊರಳಿ ಮರಳಿ ನೊಡಿದರೆ

ನಿಜಕ್ಕೂ ಗಳಿಸಿದ್ದೇ ಅಧಿಕ,ಕಳೆದದ್ದು ಕ್ಷಣಿಕ.
ತು೦ಬಿದ ಮುಕ್ಕಾಲು ಪಾಲಿಗಿ೦ತಲೂ ಹೆಚ್ಚೇ?
ಖಾಲಿ ಕಾಲು ಪಾಲು?

ಸುಮ್ನೇ... ಸುಮ್ ಸುಮ್ನೇ..ಎಲ್ಲರೂ ಅಳ್ತಾರೆ೦ತ,
ಅಳ್ಬೇಕೆ..ನಾವು ನೀವೂನು?

"ರಾ" ಎ೦ದರೆ ರಾಮಾಯಣ ತಿಳಿವ,
ತಮಗೆ ಗೊತ್ತಿಲ್ಲದ್ದೇನು?..

~~~~~~~~~~~~