ಬೇಕು ಕಣೆ ಇಂದು ನಿನ್ನಂಥವರೇ..
---------------------------
ಮಂಥರೆ
ನಿನ್ನಿಂದಾಗಿ ನಡೆದದ್ದೇನು ರಾಮಾಯಣ?
ಹೇಳು ಮಂಥರಾ,
ಯಾಕೆ ಹೊಸೆದೆ ಈ ರೀತಿ ಬತ್ತಿ?
ಮುದ್ದಿನ ರಾಣಿಯ ಅಃತಪುರದ ಅಂತರಂಗದಲ್ಲಿ?
ನೀನು ಹಿಂಡಿದ ತೊಟ್ಟು ಹುಳಿಯಿಂದಾದ್ದದೇನು?
ಹಿಡಿಯಬೇಕಾಯಿತೇ
ರಾಮ ಕಡೆಗೊಲು
ಎತ್ತಿ ಹಿಡಿಯಲು ನಡೆನುಡಿಯ
ಮೇಲ್ಪಂಕ್ತಿ ನವನೀತ!
ಅರಿವಿತ್ತೇ ನಿನಗೆ
ಅರಿವುಗೆಟ್ಟ ಮತಿಹೀನ ಮನಸ್ಸುಗಳ
ಮಡುಹಿ
ರಾಮ
ರಾಜ್ಯವ ಕಟ್ಟುವನೆಂದು?
ಹದಿನಾಲ್ಕು ವರುಶದಲಿ
ಹಾದಿತಪ್ಪಿದ ನಾಲ್ಕು ದಿಕ್ಕಿನ ಲೊಕದಲ್ಲಿ
ರಾಮ
ಬಾಣದ ರೀತಿ
ಮಾಡುವನು ಲಕ್ಷ್ಯಬೇಧವೆಂದು?
ಹೇಳು ಮಂಥರಾ,
ನಿನ್ನಿಂದಾಗಿ ನಡೆದದ್ದೇನು ರಾಮಾಯಣ?
ಕೇಕಯ ದಿಂದ ನಲಿನಲಿದು ಬಂದೆ
ಕೈಕೇಯಿಯ ಪಾದ ದಾಸಿಯಾಗಿ
ದಶರಥನ ಕಿರಿಯ ರಾಣಿಯ
ಹಿರಿಯ ದಾಸಿಯಾಗಿ.
ನಿನ್ನೊಳಗೆ ಅಂದೇ
ತುಂಬಿ ತಂದಿದ್ದಿಯೇನೇ
ಇಂಥ ಮಾತ್ಸರ್ಯದ ಮಾಯಾ ಮಡಿಕೆಯ!
ಆದರೆ ಮಂಥರಾ,
ಅಯೋಧ್ಯೆಯ ಅಗಸನಿಗೂ ನ್ಯಾಯ ಸಿಗುವ ಮೊದಲು
ನಡೆಯಿತು..ನೊಡು
ಭರತ
ಖಂಡದಲ್ಲೆಲ್ಲ
ಅನ್ಯಾಯ ಅನೀತಿಯ ಸಂಹಾರ?
ಅಹಲ್ಯೆ
ಶಬರಿ
ಯ ಉಧ್ಧಾರ!
ಮಂಥರೇ
ಬೇಕು ಕಣೆ ಇಂದು ನಿನ್ನಂಥವರೇ..
ನಮ್ಮ ಮನದ ವನವಾಸಕ್ಕೂ
ರಾವಣ ಮಾರೀಚ ಮಾಯಾಜಿಂಕೆಯ ಸಂಹಾರಕ್ಕೂ..
ಕೊನೆಗೆ ರಾಮ ರಾಜ್ಯದ ನಿರ್ಮಾಣಕ್ಕೂ..
ಮಾತ್ಸರ್ಯವೇ ಮೈಯಾದ
ಹಣ್ಣು ಹಣ್ಣು ಮುದುಕಿ..ನಿನಗೆ ಸಿಕ್ಕ
ಈ ಮರ್ಯಾದೆಯಿಂದಾಗಿಯೇ
ನನಗೆ ನಿನ್ನಲ್ಲಿ ಹೇಳಲಾಗದಷ್ಟು
ಮಾತ್ಸರ್ಯ..
ಮಂಥರಾ..
-------------
24 comments:
ಮತ್ಸರ ಎಲ್ಲೆಲ್ಲೂ ಇದೆ...! ಚೆನ್ನಾಗಿದೆ ಕವನ.
ಕಥೆಯನ್ನು ಕಟ್ಟುವಲ್ಲಿ ಕವಿ ಮನುಷ್ಯಸಹಜವಾದ ಮಾತ್ಸರ್ಯವನ್ನು ಬಳಸಿಕೊಂಡ ರೀತಿ ಎಷ್ಟು ಸುಂದರವಾಗಿದೆ ಅಲ್ವಾ?
ರಾಮಾಯಣ ಒದ್ತಾ ಇದ್ದಾಗಲೇ ಮಂಥರೆ ನನ್ನ ಗಮನ ಸೆಳೆದ ಪಾತ್ರವಾಗಿತ್ತು,ಅದು ಇಂದು ಕವಿತೆಯಾಯಿತು.
ತ್ಯಾಂಕ್ಸ್..ಸುಭ್ರಮಣ್ಯರೇ..
ನಿಜ... ಜಗತ್ತು ನಾವು ನೋಡಿದ ಹಾಗೆ ಅ೦ತಾರಲ್ಲ..ಹಾಗೆ.. ಮ೦ಥರೆಯ೦ತಹ ಮಾತ್ಸರ್ಯವೇ ತು೦ಬಿದ೦ಥ ಪಾತ್ರದಲ್ಲಿಯೂ ಜಗತ್ತಿಗಾದ ಒಳಿತನ್ನು ಆರಿಸಿ ನೋಡಿದ್ದೀರಲ್ಲಾ..! ತು೦ಬಾ ಚೆನ್ನಾಗಿ ಬರೆದಿದ್ದೀರಿ
ಧನ್ಯವಾದಗಳು.
Chennaagide nimma Gadya-Padya..
'ವೆಂಕಟಕೃಷ್ಣ' ಅವರೇ..
ಸರಿ.. ನಿಜ... ಚೆನ್ನ!
ನನ್ನ 'ಮನಸಿನಮನೆ'ಗೆ...:http//manasinamane.blogspot.com
ಕೆ.ಕೆಯವರೆ, ಮ೦ಥರೆಯಿ೦ದಾಯಿತೇ ರಾಮಾಯಣ ಪ್ರಶ್ನೆ ಒತ್ತಟ್ಟಿಗಿರಲಿ.ರಾಮನು ಪ್ರಪ೦ಚಮುಖಕ್ಕೆ ಪ್ರಕಟಗೊಳ್ಳುವಲ್ಲಿ ಮ೦ಥರೆ ಪ್ರಧಾನವಾದಳು ಅಲ್ವೇ? ಇನ್ನೊ೦ದಿದೆ,ಗೂನು ಬೆನ್ನಿನ ಮ೦ಥರೆ ಎಲ್ಲರಿ೦ದಲೂ ಅವಜ್ನೆಗೊಳಗಾದ ಮ೦ಥರೆ,ಸರಿ ಪ್ರಾಯದಲ್ಲೇ ಎನೂ ಅನುಭವಿಸದ ಮ೦ಥರೆ, ಕೈಕೇಯಿ ಪ್ರಾಯದಲ್ಲಿ ಸಾಕಷ್ಟು ಕಿರಿಯವಳಾಗಿದ್ದು,ಬಹಳಷ್ಟು ವಯಸ್ಸು ವ್ಯತ್ಯಾಸವಿದ್ದ ದಶರಥನನ್ನು ಮದುವೆಯಾದಾಗ ,ನಿಜವಾಗಿಯೂ ಮನದಲ್ಲೇ ನೊ೦ದ ಮ೦ಥರೆ ಕಿರಿಯ ರಾಣಿಯ ಸೌಖ್ಯವನ್ನು,ಸುಖವನ್ನು,ದೃಷ್ಟಿಯಲ್ಲಿಟ್ಟು ಓರ್ವ ಹೆಣ್ಣಾಗಿ ಹಾಗೆ ವರ್ತಿಸಿದ್ದಿರಬಹುದೇ?
ರಾಮಾಯಣಕ್ಕೆ ರಾಮನೇ ಪ್ರಧಾನವಾದಾಗ ,ಮ೦ಥರೆ,ಊರ್ಮಿಳೆಯ೦ತಹ ಪಾತ್ರಗಳು ಗೌಣವಾದವೇ? ಚಿ೦ತಕರು ತಿಳಿಸಬೇಕು.ಒಟ್ಟಿನಲ್ಲಿ ಕೆ.ಕೆಯವರೆಚಿ೦ತನೆಗೆ ಕಿಚ್ಚು ಹಚ್ಚಿದಿರಿ
bahala uttama kavithe nanage modalindalu ahalya, seetha , manthara paathragalendare adeno seletha nimm akvanadalli manthare yanu nodi bahala santhasavaithu, mamatheya suli manthare odidda nenapu mathe kadihtu.
ಬಹಳ ಚೆನ್ನಾಗಿದೆ , ನನಗೆ ಮೊದಲಿಂದಲೂ ಅಹಲ್ಯ , ಸೀತಾ, ಮಂಥರೆ ಬಹಳ ಇಷ್ಟ . ಅದಕ್ಕೆ ನಿಮ್ಮ ಈ ಕವನ ಬಹಳ ಮೆಚ್ಹುಗೆ ಆಯಿತು, ಮಮತೆಯ ಸುಳಿ ಮಂಥರೆ ಓದಿದ ನೆನಪು ಮರುಕಳಿಸಿತು, "ಕೆಲವೊಮ್ಮೆ ನಮ್ಮ ಅನಿವಾರ್ಯದ ನಡವಳಿಕೆಗಳು ನಮ್ಮನ್ನ ತಪ್ಪಾಗಿ ಅರ್ಥೈಸಿ ಬಿಡುತವೇ.ಮನ್ತಾರೆ ವಿಷಯದಲ್ಲೂ ಇದೆ ಆಗಿದ್ದು . ಕೈಕೇಯ ಪ್ರೀತಿ, ಭರತನ ಭವಿಷ್ಯ ಎಲ್ಲವು ಮಂಥರೆಯ ನಡವಳಿಕೆಗೆ ಕಾರಣವಾದವು, ಹೌದು ಕೈಕೆಯು ಕೂಡ ಒಂದು ರೀತಿ ಪಾಪ ಎನಿಸುವಂಥ ಪಾತ್ರ, ನನಗೆ ಅಹಲ್ಯ ಕಡಿದಷ್ಟು ಮತ್ಯಾರು ಕಾಡಲಿಲ್ಲ . ಅಹಲ್ಯ ವರ್ಸೆಸ್ ವೈದೇಹಿ!!!ಬಹಳ ಕಾಡುವುದು
ಮಂಥರೆಯ..
ಮತ್ಸರವನ್ನು ವಿಭಿನ್ನವಾಗಿ ಚಿತ್ರಿಸಿದ್ದೀರಿ.. ಇಷ್ಟವಾಯಿತು...
ಅಭಿನಂದನೆಗಳು ಚಂದದ ಕವಿತೆಗೆ...
ಮಂಥರೆ ಒಂಥರಾ ಚೆನ್ನಾಗಿದೆ.
ಇಷ್ಟು ಸಲೀಸಾಗಿ ಕವನ ಹೊಸೆಯುವುದನ್ನು ನೋಡಿದಾಗ ನನಗೆ ಅಸೂಯೆಯಾಗುತ್ತೆ
ಅಷ್ಟೆ.
ಅಭಿನಂದನೆಗಳು. ಗಿರೀಶ ಭಟ್
ನನ್ನ ಮಟ್ಟಿಗೆ ಯಾವ ಗುಣಗಳೂ ಕೆಟ್ಟದ್ದಲ್ಲ.
ಕಾಮ,ಕ್ರೋಧ,ಮದ,ಮತ್ಸರ...
ಎಲ್ಲವೂ ಎಲ್ಲಿರಬೇಕು ಮತ್ತು ಎಷ್ಟಿರಬೇಕು ಎನ್ನುವುದೇ ಮುಖ್ಯ.
ನಾವುಗಳು ಅದನ್ನು ಹೇಗೆ ನೋಡ್ತೇವೆ ಎನ್ನುವುದು ನಮ್ಮ ನಮ್ಮ ತಿಳುವಳಿಕೆಯನ್ನು ಹೊಂದಿ,ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತದೆ.
ಅಭಿಪ್ರಾಯಿಸಿದ ಎಲ್ಲ ಸ್ನೇಹಿತರಿಗೆ
ಧನ್ಯವಾದಗಳು.
Kavana bareyuthiddiralla yendu matsaravaguthide. Bareyiri innoo bareyiri - Gautham
ಕವನ, ಅದರ ನಿರೂಪಣೆ ಬಹಳ ಇಷ್ಟ ಆಯಿತು.
ಅದರೊಂದಿಗೆ ನನಗೆ ಬಹಳ ದಿನದಿಂದ ಮನಸ್ಸಿಗೆ ಅನಿಸುತ್ತಿದ್ದ ತತ್ವಕ್ಕೆ ಪುಷ್ಟಿ ಸಿಕ್ಕಂತಾಯಿತು. 'ಎಲ್ಲವೂ ಹೇಗೆ ಆಗಬೇಕೋ ಹಾಗೆ ಆಗುತ್ತದೆ, ನಾವು ನಿಮಿತ್ತ ಮಾತ್ರ ಅಂತ'-ಇದನ್ನ ಬಲ್ಲವರು ಮೊದಲೇ ಹೇಳಿದ್ದಾರೆ, ಅದರೂ ಅದನ್ನ ಮನಸ್ಸಿನ ಕೋಲ್ಡ್ storage ಗೆ ಹಾಕಿ 'ನಾನು ಬದಲಾಯಿಸುತ್ತೇನೆ' ಅಂತಅಂದುಕೊಳ್ಳುವುದು ಬರೇ ಮಿಥ್ಯೆ ಅಂತ ನಾನು ಕಂಡುಕೊಂಡ ಸತ್ಯ. ಹಾಗೆ ರಾಮಾಯಣದ ಕಥೆಗೆ ಮಂಥರೆಯೂ ಒಂದು ನಿಮಿತ್ತ ಮಾತ್ರ, 'ಯಾರು ಯಾವ ಪಾತ್ರದಲ್ಲಿ ಅಭಿನಯಿಸಬೇಕು' ಅಂತ ಅನ್ನುವುದು ಪೂರ ನಿಯೋಜಿತ.
ನಿಜ.ಗೀತಾ,
ಒಟ್ಟಿನಲ್ಲಿ ಆರಕ್ಕೇರದೆ ಮೂರಕ್ಕಿಳಿಯದೆ,
ಗೊಂದಲದ ಗೂಡಾಗದೆ,
ನೆಮ್ಮದಿಯಿಂದ ಬದುಕುವುದೇ,
ಹುಟ್ಟು ಸಾವಿನ ಮದ್ಯದ ಈ ಜೀವನ.
ತುಂಬಾ ಚೆನ್ನಾಗಿದೆ ಕವನ. ವಿಭಿನ್ನ ದೃಷ್ಟಿಕೋನವನ್ನು ನೀಡಿದ್ದೀರಿ ಮಂಥರೆಗೆ.
ಆದರೆ ನನ್ನ ಪ್ರಕಾರ ಮಂಥರೆಗಿದ್ದಿದ್ದು ಮಾತ್ಸರ್ಯಕ್ಕಿಂತ ಹೆಚ್ಚಾಗಿ ಸ್ವಾರ್ಥ ಹಾಗೂ ಭರತನ ಮೇಲೆ ಆತನ ತಾಯಿ ಕೈಕೇಯಿಯ ಮೇಲಿದ್ದ ನಿರ್ವಾಜ್ಯ ಪ್ರೇಮ. ಎಲ್ಲರೂ ತಿರಸ್ಕರಿಸಿದಾಗ, ತುಚ್ಛವಾಗಿ ಕಂಡಾಗ ತುಸು ಪ್ರೀತಿಯ ತೋರಿದ ಆ ಜೀವಗಳಿಗಾಗಿ ಈ ಜೀವ ಆ ರೀತಿ ಯೋಚಿಸಿತು ಎಂದೆನಿಸುತ್ತಿದೆ.
ಕೈಕೇಯಿ ಮತ್ತು ಭರತ ರನ್ನು,
(ಕಥೆಪಡೆದುಕೊಳ್ಳುವ ತಿರುವಿನ) ಈ ಸಂದರ್ಭದಲ್ಲಿ ರಕ್ಷಿಸುವ ಸಲುವಾಗಿ ಮಂಥರೆಯನ್ನು ಕವಿ ಬಳಸಿಕೊಂಡಿರಬಹುದೇ?
ಆಕೆಗೆ ಕೈಕೇಯಿ ಮತ್ತು ಭರತರ ಮೇಲಿದ್ದದ್ದು ಪ್ರೇಮವೋ,ಅಲ್ಲ ತಾನು "ಮಹಾರಾಣಿಯ ದಾಸಿ"ಅಂತ ಹೇಳಿಸಿಕೊಳ್ಳಬೇಕೆಂಬ ಸ್ವಾರ್ಥವೋ,
ಒಟ್ಟಿನಲ್ಲಿ
ಮಂಥರೆಯನ್ನು ಬಲಿಕೊಟ್ಟು, ಕವಿ ಕೈಕೇಯಿಯನ್ನು ಕೆಳಗೆ (ಹೆಚ್ಚು) ಬೀಳದಂತೆ, ತಡೆಗೋಡೆಯಾಗಿ ಬಳಸಿದ್ದಾನೆ.ಅಂತ ನನಗೆ ಅನಿಸಿತು.
ಹಾಗಾಗಿಯೇ ಏನೊ ನನಗೆ ಮಂಥರೆ ಬಗ್ಗೆ ಮರುಕ.(ನನ್ನ ಇನ್ನೋರ್ವ ಸ್ನೇಹಿತ ಕುಮಾರಸುಭ್ರಮಣ್ಯ ರು ಬರೆದಂತೆ ಊರ್ಮಿಳೆಯೂ ಇಂಥಹದೇ ಇಂದು ಪಾತ್ರ ರಾಮಾಯಣದಲ್ಲಿ)
ಅದಕ್ಕೇ ನಾನಾದರೂ ಆಕೆಯನ್ನು ತುಸು ಭಿನ್ನ ವಾಗಿ ನಿಮ್ಮ ಮುಂದೆ ಇರಿಸೊಣ ಅಂತ ಹೀಗೆ ಬರೆದೆ.
ತೇಜಸ್ವಿನಿ,ನನ್ನ ಉಳಿದ ಕವನಗಳನ್ನೂ ಓದಿ..ಅಭಿಪ್ರಾಯ ತಿಳಿಸಿ.
ಧನ್ಯವಾದಗಳು.
ಮಂಥರೆ ನಮ್ಮೆಲ್ಲರಲೂ ಇದ್ದಾಳೆ
ಅವಳ ವ್ಯಕ್ತಿತ್ವವೇ ಹಾಗೆ
ಅದೊಂದು ಪ್ರೇಮದ ಶಿಖರ
ವಾತ್ಸಲ್ಯದ ಮೂರ್ತಿ
ಮಾತ್ಸರ್ಯದ ಮನಸ್ಸು
ಅದೊಂದು ನವರಸಗಳ ಸಂಗಮ
ನಿಮ್ಮ ಕವನ ಬಹಳಷ್ಟು ಯೋಚನೆಗೆ ಎಡೆ ಮಾಡಿಕೊಟ್ಟಿತು
ಗುರುಮೂರ್ತಿಯವರೇ,
ಸತ್ಯ ಹೇಳ್ಬೇಕಂದ್ರೆ..ಖುಷಿಯಾಯಿತು.
ಒಂದು ಕವನ ಒಂದಷ್ಟು ಜನರನ್ನ ಯೋಚನೆಗೆ ಹಚ್ಚಿತು ಅನ್ನುವುದಕ್ಕಿಂತ..
ಹೆಚ್ಚು ಸಂತೋಷ ಒಬ್ಬ ಬರೆದವನಿಗೆ ಇನ್ನೇನಿದೆ ಹೇಳಿ?
ನಿಮ್ಮ ಹೃದಯದ ಮಾತು..ಮನಸ್ಸಿಗೆತಟ್ಟಿತು.
ಧನ್ಯವಾದಗಳು ಸಾರ್.
ನಿಮ್ಮ ಮಂಥರೆಯ೦ತಹ ಮಂಥರೆ ಇ೦ದು ನಮ್ಮೆಲ್ಲರೊಳಗೆ ಜೀವ೦ತ ಇದ್ದಾಳೆ. ನಾವೆಲ್ಲರೂ ಮ೦ಥರೆಯ ಮತ್ಸರ, ಮಹತ್ವಾಕಾ೦ಕ್ಷೆ ಹೊತ್ತು ಸಾಗುತ್ತಿದ್ದೇವೆ ಅನಿಸುತ್ತದೆ. ನಿಮ್ಮ ಕವನ ಬಹಳ ಚೆನ್ನಾಗಿ ಮೂಡಿ ಬಂದಿದೆ. ಬಹಳ ದಿನಗಿ೦ದ ನಿಮ್ಮ ಬ್ಲಾಗಿನೊಳಗೆ ಬ೦ದು ಹೋಗುತ್ತಿದ್ದೆ, ಇಂದು ಕಾಮೆ೦ಟಿಸುವ ಅವಕಾಶ ಸಿಕ್ಕಿತು.
ಪರಾಂಜಪೆಯವರೇ,
ಧನ್ಯವಾದಗಳು.
ಕೆ.ಕೆ.ವಿ ಯವರೇ..ಇದು ನೀವು ಪಂಡೊರಾ ಪೆಟ್ತಿಗೆ ತೆರೆಯುವಂತಹ ಮಾತನ್ನ ಕವನದ ಮೂಲಕ ಹೇಳಿ ಮಹಾಹಾರ್ಯಗಳು ಮಹಾಪಾತಕದ ಫಲ ಎನ್ನುವುದನ್ನು ತೋರಿಸಿದ್ದಿರಿ..ಹೌದು ಧರ್ಮಕಾರ್ಯದ ವಿಶಾಲತೆಯ ವ್ಯಾಪ್ತಿಯಲ್ಲಿ ಇಂತಹ ಪಾತಕಗಳು ಅನಿವಾರ್ಯ..ಅಲ್ಲವೇ..ದ್ರೌಪದಿಯ ಸೀರೆಯನ್ನೇ ಸೆಳೆಯಬೇಕಿತ್ತಾ ಮಹಾಭಾರತ ನಡೆಸಲು..ಎಮ್ದು ಕೇಳುವವವ್ರೂ ಇಲ್ಲದಿಲ್ಲ..ಆದರೆ ಅದು ಸತ್ಯ..ಸೂರ್ಯ ಸಿಡಿದಿದ್ದರಿಂದಲ್ಲೇ ಪೃಥ್ವಿಯ ಜನನ ಸಾಧ್ಯವಾದದ್ದು..? ಚನ್ನಾಗಿದೆ ನಿಮ್ಮ ಮಂಥನ
ಧನ್ಯವಾದಗಳು..
ತಮ್ಮ ಪ್ರೋತ್ಸಾಹಕ್ಕೆ..
ಧನ್ಯವಾದಗಳು..
ಶಿವಶಂಕರ್ ರವರೇ..
Post a Comment