Friday, March 26, 2010

ಹೇಳು ಮುದ್ದೂ...
---------

ಮನಸು ನನ್ನ
ಮುದ್ದಿನಕೂಸು...
ಗಮನ ತಪ್ಪಿದರೆ,ಅರೆಕ್ಷಣ
ಅತ್ತು ಅರಚಿ ರಂಪಾಟ..

ತೊದಲುತ್ತ,
ತೆವಳುತ್ತ ಬಂದು
ತೆಕ್ಕೆ ಬಿದ್ದು...
ಮೊಹಕ ನಗೆ ಬೀರಿ..
ಮೋಹದ "ಬಿರಿ" ಬಿಗಿದು..
ನಾನೋ ಅದರ ಕೈಯ ಆಟದಗೊಂಬೆ!!

ನಮ್ಮ ಕೂಸಲ್ಲವೇ?
"ಕೂಸು ಮರಿ" ಮಾಡಿ..
ಬೆನ್ನಲ್ಲಿ ಹೇರಿ..ತಲೆಯಲ್ಲಿ ಹೊತ್ತು..
ಆಟವಾಡದೆ ಇರಲಿ ಹೇಗೆ ನೀವೇ ಹೇಳಿ??

ಮಗು ಇನ್ನೂ ಚಿಕ್ಕದು..
ಮಕ್ಕಳಾಟವು ಚೆಂದ..ಮಗುವಿನ ನಡೆ ಇನ್ನೂ ಅಂದ
ತಿನ್ನಿಸಲು, ತಿರು ತಿರುಗಿ..
ಅದೋ ನೋಡು..ಬಾನಗೂಡು..ಹಾರುತಿದೆ ವಿಮಾನವು..
ಚಂದಮಾಮ ಚಕ್ಕುಲಿ ಮಾಮ..ಬಾ..ಬಾ..ಬಾ..
ಕಾಗೆಯೊಂದು ಹಾರಿಬಂದು..
ಕಾಗಣ್ಣಾ..ಗುಬ್ಬಕ್ಕಾ..ಬನ್ನಿ..ಬನ್ನಿ..
ಊಟವೇ ಮಾಡಿಲ್ಲ..ಮಗು ಬೇಕಾದ್ದು ತಿಂದಿಲ್ಲ..
ಎದೆ ಹಾಲೂ ಬತ್ತಿದೆಯಲ್ಲ !

ಹೀಗಾದರೆ ಹೇಗೆ ಮಗುವೇ?
ನೀನೆಂದು ಬೆಳೆವೆ.. ಹೇಳು?
ನನಗೆ ಊರುಗೊಲಾಗಿ
ಊರೆಲ್ಲ ಸುತ್ತಿಸಿ ನನ್ನ ಆಧಾರವಾಗಿ
ನೀನೆಂದು ಬರುವೆ ಹೇಳು?

ಮನಸು ನನ್ನ
ಮುದ್ದಿನ ಕೂಸು
ಅತ್ತರೂ ಚೆಂದ ನಕ್ಕರೂ ಚೆಂದ
"ಹೆತ್ತವರಿಗೆ ಹೇಗಿದ್ದರೂ ಚೆಂದ"

ಮನಸೇ ಓ ನನ್ನ
ಮುದ್ದಿನ ಕೂಸೇ..
ನಿಜಕ್ಕಾದರೂ..
ಆಟವಾಡಿಸುತ್ತಿರುವುದು
ನಾನು ನಿನ್ನನ್ನೇ??
ಅಲ್ಲ ನೀನು ನನ್ನನ್ನೇ??
ಹೇಳು ಮುದ್ದೂ...
-----------------

13 comments:

ಸೀತಾರಾಮ. ಕೆ. / SITARAM.K said...

ಮನಸ್ಸನ್ನು ಮಗುವಿಗೆ ಹೋಲಿಸಿ ನಾವೂ ಮುದ್ದು ಮಾಡುವ ಪರಿ ಚೆ೦ದವಾಗಿ ಹೇಳಿದ್ದಿರಾ.... ಮಗುವಿಗೂ ಹೊ೦ದುತ್ತೆ -ಮನಸ್ಸಿಗೂ ಹೊ೦ದುತ್ತೆ. ಚೆ೦ದ ತ೦ತ್ರಗಾರಿಕೆಯ ಕವನ.

ಮನಮುಕ್ತಾ said...

ತು೦ಬಾ ಚೆನ್ನಾಗಿ ಬ೦ದಿದೆ ಕವನ..ನಮ್ಮ ಮನಸ್ಸಿನಲ್ಲಿದುದು ಯಾವಾಗಲೂ ಸರಿ ..ಹಾಗೆಯೇ ನಮ್ಮ ಮಕ್ಕಳು ನಮಗೆ ಸರಿ..ಎ೦ಬ ಸತ್ಯವನ್ನು ಪೂರಕ ಹೋಲಿಕೆಯೊಡನೆ ಬಹಳ ಸು೦ದರವಾಗಿ ಬಣ್ಣೀಸಿದ್ದೀರಿ.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಸೀತಾರಾಮ್,ಮನಮುಕ್ತಾ,
ಧನ್ಯವಾದಗಳು..

ಮನದಾಳದಿಂದ............ said...

ಮನಸನ್ನು ಮುದ್ದು ಮಾಡುತ್ತಾ, ಲಲ್ಲೆಗರೆಯುತ್ತಾ, ಮನಸ್ಸಿಗೆ ಹೋಲಿಸಿದ ಪರಿ ಸುಂದರವಾಗಿದೆ. ಸುಂದರವಾದ ಚೆಂದದ ಕವನ.

Unknown said...

Chennaagide ...

V.R.BHAT said...

ಮನಸ್ಸು ಒಂದು ಮುದ್ದು ಕೂಸು ಎಂಬ ನಿಮ್ಮ ಕಲ್ಪನೆ ಒಳ್ಳೆಯದೇ, ಮನಸ್ಸನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಅದು ಕೂಸಿನ ಥರ ಬ್ಯುಸಿ ರಸ್ತೆಯಲ್ಲಿ ಓಡಾಡುವ ಗಾಡಿಗಳ ಮಧ್ಯೆ ಸಿಲುಕಿದಂತೆ ಆಗಬಹುದು, ಮನಸ್ಸಿಗೆ ತನ್ನನ್ನು ನಿಯಂತ್ರಿಸುವ ಮನಸ್ಸಿಲ್ಲ ! ಹೀಗಾಗಿ ನಾವೇ ನಿಯಂತ್ರಿಸುವಾಗ ಈ ಕವನ ಸೂಕ್ತವೇ !

ಸಾಗರದಾಚೆಯ ಇಂಚರ said...

ಮನಸ್ಸಿನ ಬಗೆಗಿನ ಕಲ್ಪನೆ ತುಂಬಾ ಚೆನ್ನಾಗಿದೆ
ಒಳ್ಳೆಯ ಕವನ

ಅಜಕ್ಕಳ ಗಿರೀಶ ಭಟ್ said...

ಮನಸನ್ನು ಕೂಸಾಗಿ ಕಂಡ ಬೇರೆ ಕವನ ಓದಿಲ್ಲ ಈವರೆಗೆ. ಮನವೆಂಬ ಮರ್ಕಟನನ್ನು ಹೊಸ ಬಗೆಯಲ್ಲಿ ಚಿತ್ರಿಸಿದ ಕವನ ನಿಜವಾಗಿ ಚೆನ್ನಾಗಿದೆ.ಥವಾ ಇದು ಮಗುವಿನ ಆಟವನ್ನೇ ವರ್ಣಿಸುವ ಕವನ ಎಂದೂ ಓದಲು ಸಾಧ್ಯವಿದೆ.ಐ ಜಸ್ಟ್ ಲೈಕ್ಡ್ ಇಟ್. ಧನ್ಯವಾದಗಳು. ಗಿರೀಶ.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಪ್ರವೀಣ್,ರವಿಕಾಂತ್,ವಿ.ಆರ್.ಭಟ್,ಗುರುಮೂರ್ತಿಯವರೇ,
ಹಾಗೂ ಗಿರೀಶ್ ಭಟ್ರೇ..
ತಮ್ಮೆಲ್ಲರ ಅಭಿಪ್ರಾಯಕ್ಕೆ
ಧನ್ಯವಾದಗಳು.

ಜಲನಯನ said...

ವೆಂಕಿಯವರೇ, ಮನಸನ್ನು ಮುದ್ದು ಕೂಸಿಗೆ ಹೋಲಿಸಿ...ಮನದ ತೊಳಲಾಟ ಮಗುವಿನ ಮುಗ್ದತೆಗೆ ಬನ್ಣ ಕೊಟ್ಟು ಪುಟ್ಟ ಸರಳ ಸಾಲುಗಳಲ್ಲಿ ಮುಂದಿಟ್ಟಿದ್ದೀರಿ...ಅಭಿನಂದನೆಗಳು.

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಹೌದಲ್ಲ,ಮಗುವಿನ೦ತೆ ಮನಸ್ಸು ನಾವು ಹೇಗೆ ಬೆಳೆಸುತ್ತೇವೆಯೊ,ಹಾಗೆ ಬೆಳೆಯುತ್ತದೆ.
"ನಿಜಕ್ಕಾದರೂ..
ಆಟವಾಡಿಸುತ್ತಿರುವುದು
ನಾನು ನಿನ್ನನ್ನೇ??
ಅಲ್ಲ ನೀನು ನನ್ನನ್ನೇ??
ಹೇಳು ಮುದ್ದೂ..."ಬಹಳ ಇಷ್ಟವಾದವು ಸಾಲುಗಳು.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಜಲನಯನ..
ಕೂಸು ಮುಳಿಯಾಲ..
ವಂದನೆಗಳು.

Arun said...

Yenta Manasu ree nimdu! Olle Kavana Pratibhe.

Adakke heliddu Hiriyoru, Yentaa sogasu Maguvina Manasu Antha

Post a Comment