
---------
ಮನಸು ನನ್ನ
ಮುದ್ದಿನಕೂಸು...
ಗಮನ ತಪ್ಪಿದರೆ,ಅರೆಕ್ಷಣ
ಅತ್ತು ಅರಚಿ ರಂಪಾಟ..
ತೊದಲುತ್ತ,
ತೆವಳುತ್ತ ಬಂದು
ತೆಕ್ಕೆ ಬಿದ್ದು...
ಮೊಹಕ ನಗೆ ಬೀರಿ..
ಮೋಹದ "ಬಿರಿ" ಬಿಗಿದು..
ನಾನೋ ಅದರ ಕೈಯ ಆಟದಗೊಂಬೆ!!
ನಮ್ಮ ಕೂಸಲ್ಲವೇ?
"ಕೂಸು ಮರಿ" ಮಾಡಿ..
ಬೆನ್ನಲ್ಲಿ ಹೇರಿ..ತಲೆಯಲ್ಲಿ ಹೊತ್ತು..
ಆಟವಾಡದೆ ಇರಲಿ ಹೇಗೆ ನೀವೇ ಹೇಳಿ??
ಮಗು ಇನ್ನೂ ಚಿಕ್ಕದು..
ಮಕ್ಕಳಾಟವು ಚೆಂದ..ಮಗುವಿನ ನಡೆ ಇನ್ನೂ ಅಂದ
ತಿನ್ನಿಸಲು, ತಿರು ತಿರುಗಿ..
ಅದೋ ನೋಡು..ಬಾನಗೂಡು..ಹಾರುತಿದೆ ವಿಮಾನವು..
ಚಂದಮಾಮ ಚಕ್ಕುಲಿ ಮಾಮ..ಬಾ..ಬಾ..ಬಾ..
ಕಾಗೆಯೊಂದು ಹಾರಿಬಂದು..
ಕಾಗಣ್ಣಾ..ಗುಬ್ಬಕ್ಕಾ..ಬನ್ನಿ..ಬನ್ನಿ..
ಊಟವೇ ಮಾಡಿಲ್ಲ..ಮಗು ಬೇಕಾದ್ದು ತಿಂದಿಲ್ಲ..
ಎದೆ ಹಾಲೂ ಬತ್ತಿದೆಯಲ್ಲ !
ಹೀಗಾದರೆ ಹೇಗೆ ಮಗುವೇ?
ನೀನೆಂದು ಬೆಳೆವೆ.. ಹೇಳು?
ನನಗೆ ಊರುಗೊಲಾಗಿ
ಊರೆಲ್ಲ ಸುತ್ತಿಸಿ ನನ್ನ ಆಧಾರವಾಗಿ
ನೀನೆಂದು ಬರುವೆ ಹೇಳು?
ಮನಸು ನನ್ನ
ಮುದ್ದಿನ ಕೂಸು
ಅತ್ತರೂ ಚೆಂದ ನಕ್ಕರೂ ಚೆಂದ
"ಹೆತ್ತವರಿಗೆ ಹೇಗಿದ್ದರೂ ಚೆಂದ"
ಮನಸೇ ಓ ನನ್ನ
ಮುದ್ದಿನ ಕೂಸೇ..
ನಿಜಕ್ಕಾದರೂ..
ಆಟವಾಡಿಸುತ್ತಿರುವುದು
ನಾನು ನಿನ್ನನ್ನೇ??
ಅಲ್ಲ ನೀನು ನನ್ನನ್ನೇ??
ಹೇಳು ಮುದ್ದೂ...
-----------------