Friday, March 26, 2010

ಹೇಳು ಮುದ್ದೂ...
---------

ಮನಸು ನನ್ನ
ಮುದ್ದಿನಕೂಸು...
ಗಮನ ತಪ್ಪಿದರೆ,ಅರೆಕ್ಷಣ
ಅತ್ತು ಅರಚಿ ರಂಪಾಟ..

ತೊದಲುತ್ತ,
ತೆವಳುತ್ತ ಬಂದು
ತೆಕ್ಕೆ ಬಿದ್ದು...
ಮೊಹಕ ನಗೆ ಬೀರಿ..
ಮೋಹದ "ಬಿರಿ" ಬಿಗಿದು..
ನಾನೋ ಅದರ ಕೈಯ ಆಟದಗೊಂಬೆ!!

ನಮ್ಮ ಕೂಸಲ್ಲವೇ?
"ಕೂಸು ಮರಿ" ಮಾಡಿ..
ಬೆನ್ನಲ್ಲಿ ಹೇರಿ..ತಲೆಯಲ್ಲಿ ಹೊತ್ತು..
ಆಟವಾಡದೆ ಇರಲಿ ಹೇಗೆ ನೀವೇ ಹೇಳಿ??

ಮಗು ಇನ್ನೂ ಚಿಕ್ಕದು..
ಮಕ್ಕಳಾಟವು ಚೆಂದ..ಮಗುವಿನ ನಡೆ ಇನ್ನೂ ಅಂದ
ತಿನ್ನಿಸಲು, ತಿರು ತಿರುಗಿ..
ಅದೋ ನೋಡು..ಬಾನಗೂಡು..ಹಾರುತಿದೆ ವಿಮಾನವು..
ಚಂದಮಾಮ ಚಕ್ಕುಲಿ ಮಾಮ..ಬಾ..ಬಾ..ಬಾ..
ಕಾಗೆಯೊಂದು ಹಾರಿಬಂದು..
ಕಾಗಣ್ಣಾ..ಗುಬ್ಬಕ್ಕಾ..ಬನ್ನಿ..ಬನ್ನಿ..
ಊಟವೇ ಮಾಡಿಲ್ಲ..ಮಗು ಬೇಕಾದ್ದು ತಿಂದಿಲ್ಲ..
ಎದೆ ಹಾಲೂ ಬತ್ತಿದೆಯಲ್ಲ !

ಹೀಗಾದರೆ ಹೇಗೆ ಮಗುವೇ?
ನೀನೆಂದು ಬೆಳೆವೆ.. ಹೇಳು?
ನನಗೆ ಊರುಗೊಲಾಗಿ
ಊರೆಲ್ಲ ಸುತ್ತಿಸಿ ನನ್ನ ಆಧಾರವಾಗಿ
ನೀನೆಂದು ಬರುವೆ ಹೇಳು?

ಮನಸು ನನ್ನ
ಮುದ್ದಿನ ಕೂಸು
ಅತ್ತರೂ ಚೆಂದ ನಕ್ಕರೂ ಚೆಂದ
"ಹೆತ್ತವರಿಗೆ ಹೇಗಿದ್ದರೂ ಚೆಂದ"

ಮನಸೇ ಓ ನನ್ನ
ಮುದ್ದಿನ ಕೂಸೇ..
ನಿಜಕ್ಕಾದರೂ..
ಆಟವಾಡಿಸುತ್ತಿರುವುದು
ನಾನು ನಿನ್ನನ್ನೇ??
ಅಲ್ಲ ನೀನು ನನ್ನನ್ನೇ??
ಹೇಳು ಮುದ್ದೂ...
-----------------

Monday, March 15, 2010ಯುಗಾದಿ ಯ
ಹೊಸಗಾದಿ
ತರಲೆಲ್ಲರ ಬಾಳಿಗೆ
ಹರುಷ,
ಸಂಭ್ರಮ.
ನೆನಸಾಗಲಿ
ಸವಿ ಕನಸುಗಳು.
ವಿಕೃತಿ
ಸಂವತ್ಸರದ ಹೆಸರಾಗುಳಿದು
ಸಂಸ್ಕೃತಿ
ನಮ್ಮೆಲ್ಲರ
ಉಸಿರಾಗಲಿ.
ಪ್ರೀತಿಯೆ
ಲೋಕದ
ಕಣ್ಣಾಗಲಿ.
ಜೀವನ ಹಣ್ಣಾಗಲಿ.
-----------------


Tuesday, March 9, 2010

ವಿದ್ಯೆ..ಕೈಚಾಚಿ ಪಡೆಯುವುದಕ್ಕಲ್ಲ!!
------------------------

ಕೈತಗ್ಗಿಸಿ ನಡುಬಗ್ಗಿಸಿ
ಪಡೆಯಲೆಂದು...
ಪಡೆಯಲಿಲ್ಲ "ವಿದ್ಯೆ".
"ಅವಿದ್ಯೆ"ಯ ಕೈಚಾಚಿ ತಳ್ಳಿ...
ಪಡೆಯ ಬಯಸಿದ್ದು
ಕೈತುಂಬ ನೀಡಬಲ್ಲ "ವಿದ್ಯೆ".

ತುಂಬ....ತುಂಬಿಕೊಳ್ಳಬೇಕೆ೦ದು
ಹಿಡಿದು ಹೊರಟೆ ದೊಡ್ಡ ಕೊಡ,
ಖಾಲಿಯಾಗದೆ..ಏನನ್ನದರೂ
ಹೇಗೆ ತುಂಬಲಿ?

ಅಬ್ಬ! ನೆನೆದರೆ
ಅದೆಷ್ಟು ಕಷ್ಟ..ಅಲ್ಲ,
"ಅಸೀಧಾರಾ ವೃತ".
"ಪಾಲಿಸಿದವಗೆ ಪಾವತಿಯಿಲ್ಲ"ವೆಂಬುದು
ಮಾತ್ರ ಇಲ್ಲಿ ಇಲ್ಲವೇ ಇಲ್ಲ.

ವಿಸ್ತಾರದ ತಿಳಿವಾದಾಗ..
ಈ ವಿದ್ಯಾಸಾಗರದ ಆಳಕ್ಕಿಳಿದೆ.
ಆಳಾಗುವುದು ತಪ್ಪಲಿ ಎಂದು.
ಸಾಗರದ ಅಲೆಗಳಡಿಯಲಿ
ನುತಿಸುತ ಮಿಂದು
ಬೆಳಕ ಕಂಡು ಬೆರಗುಗೊಂಡೆ!

"ಭವ..ಸಾಗರ"ವ ದಾಟಿ ಕೇವಲ
"ಭವಿ"ಯಾಗದೆ-ಅನುಭಾವಿ
ಆದವರೆ "ಗುರು"ವಾಗಿ ಒದಗಿ,
ಒಡೆದದ್ದಲ್ಲವೇ ಅವಿದ್ಯೆ?

ಅಚ್ಚರಿ!!!

ವಿನಯದಿಂದ "ವಿದ್ಯೆ"ಗಾಗಿ
ಬೆಳ್ಳಂಬೆಳಗ್ಗೆ ಬೇಗನೆ ಎಚ್ಚರಗೊಂಡದ್ದು..
ಮಾತ್ರ..ನೆನಪಿದೆ,
ತಗ್ಗಿ ಬಗ್ಗಿ ನವೆದು ನಡೆದು
"ಮೂರು ಬೆಳೆ"
ಪಡೆದದ್ದು..ಅರಿವಾಗಲೇ ಇಲ್ಲ.

ಅರೆ!
"ಅರಿವು" ಅರಿಯದೆ ಉಳಿದು..
ನಮಗೆ ನಾವೇ ಅರಿ ಯಾಗುವುದೇಕೆಂದು
ಅನ್ನ ರುಚಿಗಳ ಮರೆತು
ಗುರುವಿನಡಿಯಲಿ ಕುಳಿತು
ಗಳಿಸಿಕೊಂಡೆ "ವಿದ್ಯೆ".

...ಪಡೆದ ವಿದ್ಯೆ..ಕೈಚಾಚಿ ಪಡೆಯುವುದಕ್ಕಲ್ಲ!!!
--------------------------------------

Friday, March 5, 2010

ಪಯಣದ ಸುಖ!!

ನಿನ್ನಿಷ್ಟ ಏನಿದ್ದರೂ
ಸಾವು ಘಟಿಸುವ ತನಕ
ಬದುಕಲೇ ಬೇಕು
ಒದಗಿಬಂದದ್ದು
ಅನುಭವಿಸಲೇ ಬೇಕು.

ಹುಟ್ಟಿದ ಬಳಿಕ ಸಾವೇ
ಪಯಣದ ಕೊನೆ.
(ಇಚ್ಚಾಮರಣಿಗೂ ಕೊನೆಗೆ
ದೊರಕಿದ್ದು ಮರಣವೇ ತಾನೇ?)
ಅರಿವಾದರಿಷ್ಟು,...
ಇನ್ನು
ಆತಂಕಯಾಕೆ?

ಅತ್ತುಕರೆವ ಗೊಣಗಾಟ
ಚಿಂತೆಯ ಚಿತೆಯ ನರಳಾಟ
ಅಟ್ಟಿಬಿಡು ಆಚೆ.

ನಿನ್ನೊಳಗೇ ಇದೆಯಲ್ಲ,
"ಆನಂದದ ಅಮೃತಕಲಶ"
ಹೀರುತ್ತ ಖುಷಿಯ,
ಅನುಭವಿಸು ಪಯಣದ ಸುಖವ!
-------------------------