Friday, May 6, 2011




ಕನ್ನಡಿ; ಎನಗೊಂದು ಅಚ್ಚರಿ.
~~~~~~~~~~~~~~~~~~~~

ಕನ್ನಡಿ;
ಏನಚ್ಚರಿ..!

ಕನ್ನಡಿ ಗಾಜಿನಿಂದಾಗಿದೆ...ನಿಜ.
ಆದರೆ
"ಗಾಜು"ಗಳೆಲ್ಲವೂ "ಕನ್ನಡಿ"ಗಳಲ್ಲವಲ್ಲ..!

ತನ್ನೊಳಗೆ ಖಾಲಿಯಾಗಿದ್ದೂ ,
ಇರುವುದ ಇರುವಂತೆ ಪ್ರತಿಫಲಿಸುವ
ನಮ್ಮ ಅರಿವಿಗೆ ತರುವ
"ಕನ್ನಡಿ" ಸತ್ಯ !
"ಪಾರದರ್ಶಕ ಗಾಜು" ಮಿಥ್ಯವೇ ?

ಮುಟ್ಟಲಾರದ,ತಲುಪಿ,ತಟ್ಟಲಾರದ
"ಪಾರದರ್ಶಕ ಗಾಜು"
ಕೇವಲ ದರ್ಶಕ !

ಆಹಾ...
ಒಳಗಿನ ಎಲ್ಲವನ್ನೂ ಕಂಡ ದಾರ್ಶನಿಕನಿಗೂ
ಅವನ ನಿಲುವಿನ
ದರ್ಶನಕ್ಕೆ.."ದರ್ಪಣ" ವೇ ಗತಿ !

ಅರೆ ! ಏನಚ್ಚರಿ !
ದಿಕ್ಕುಗಳ ಎಡ,ಬಲ
ಅದಲು ಬದಲಾಗಿ ತೋರಿಸಿದರೂ
ಆಕಾರ ವಿಕಾರಗಳು
ಅನುಭವಕ್ಕೆ ಸಲ್ಲುವುದು,
ನಮ್ಮೆದುರು ಬಂದ"ಪಾರದರ್ಶಕ ಗಾಜು"
ಬೆನ್ನಿಗೊಂದು "ಪರೆ" ಹಚ್ಚಿಸಿಕೊಂಡು
ಅಪಾರ...ದರ್ಶಕವಾಗಿ ಆಗಿ..
ಬದಲಾಗಿ
"ದರ್ಪಣ"ವಾದಾಗ !
ಅರೆ!
ಎಷ್ಟು ಸೊಗಸಾಗಿದೆ.
***********************