Wednesday, May 5, 2010





ಬಂಧಿ...
-------------------

ಅದೇಕೊ ಏನೋ
ಇಂದು ಬೆಳಿಗ್ಗೆ
ಅಯಾಚಿತವಾಗಿ,
ಅನಿರೀಕ್ಷಿತವಾಗಿ,
ಬೀಸಿಬಂದ ಗಾಳಿಯ ರಭಸಕ್ಕೆ,
ಶತಮಾನಗಳೆಷ್ಟೊ ತುಂಬಿದ
ನನ್ನ....ಪಂಜರ..
ಚೂರು ಚೂರಾಯಿತು.

ಬಟ್ಟ ಬಯಲಲ್ಲಿ ಬಿದ್ದೂ,
ಅದು ಹೇಗೋ ಸುಧಾರಿಸಿಕೊಂಡು
ಚಾಚಿದ ಮಾಡಿನ ತೊಲೆಯನ್ನಧರಿಸಿ,ಏರಿ
ಅಲ್ಲಿಯೇ
ಕುಳಿತಿದ್ದೇನೆ.

ಪಂಜರದಲ್ಲಿ ,ಹಸಿಬಟಾಣಿ
ಚಪ್ಪರಿಸಿ ತಿನ್ನುತ್ತಾ ಇರುವಾಗ,
ಅನಿಸುತ್ತಿತ್ತು..
ಎಂದಿಗೋ..
ಹೊರಗೆ..ಹಾರಿ..
ಮುಗಿಲನೇರಿ ಆಚೆ ಲೋಕದಾಚೆ
ಅನಂತದೆಡೆಗೆ ಗಮನ.......

ಆದರೆ,
ನಾನಿನ್ನೂ ಕುಳಿತಿರುವೆ ಯಾಕಿಲ್ಲಿ?
ಮರೆತೆ.....ಯಾಕೆ ಹುಟ್ಟುಗುಣ?
ಶತಮಾನದ ಪಂಜರದ ಅಮಲೋ?
ಹಸಿ ಬಟಾಣಿಯ ಮೋಹಕ ರುಚಿಯೋ?

ಅನಾಯಾಸವಾಗಿ ದೊರಕಿದ್ದು ಮೆದ್ದು,
ಸಹಕರಿಸುತ್ತಿಲ್ಲ ದೇಹ.

ಬಹುಶ:
ಕಳಚಿದರೆ ಮಾತ್ರ
ದೇಹ..
ಪಂಜರ ಕಳಚಿಕೊಂಡದ್ದು
ಅರಿವಾಗಿ
ರೆಕ್ಕೆ ಬಿಚ್ಚಿಕೊಂಡೀತೇನೋ...
ದಿಗಂತ..ಗಮನ
ಅನಂತಯಾನ ಲಭ್ಯವೇನೋ?
---------------------------
(ಚಿತ್ರ..ಅಂತರ್ಜಾಲ)