Saturday, February 27, 2010

...ಚರ!!

ಯಾವುದೂ,ಹೇಗೂ
ಸ್ಥಿರವಿರದ
ನನ್ನ ನಿನ್ನ ಜಗತ್ತಲ್ಲಿ
ಚಲಿಸದಂತೆ ಮನವ
ಮೊಡಿಮಾಡಿ
ಸ್ಥಿರವಾಗಿಸುವ ಪ್ರಯತ್ನ!!
ಅದ್ಯಾವ ಪುಣ್ಯಾತ್ಮ
ತುಂಬಿದನೊ ನಿನ್ನ ತಲೆಯಲ್ಲಿ?

ರಾತ್ರಿಯೂ ಹಗಲೂ
ನೀನೇ ಹೇಳಿಕೊಳ್ಳುವಂತೆ
ಮನಸಿನಒಳಗೂ (ಆಶ್ಚರ್ಯ)
ಹೊರಗೂ "ಅದೇ ಧ್ಯಾನ ವಂತೆ"
ಹೊಸಬಗೆಯ"ರೊಗವಂತೆ"..
ಹೇಗಾಯಿತು?ಹೀಗೇಕಾಯಿತು?

ಅಂತ ನನ್ನ ಕೇಳಿದರೆ
ಏನು ಹೇಳಲಿ ಗೆಳೆಯ?
ನನಗೊ
ಈ ರೋಗ ಹಿಡಿದು
ವರುಷವಾಯಿತು,ಇಪ್ಪತೈದು
ಕೊಟ್ಟಿಲ್ಲ ಯಾವ
ಹೊಸ ವೈದ್ಯನೂ,ಹಳೆರೋಗಿಯೂ
ಇನ್ನೂ ಇದಕ್ಕೆ ಮದ್ದು!!!

ಸ್ಥಿರಗೊಳಿಸುವ ಆಸೆ ನಿಲ್ಲಿಸಿ
ಈಗ
ಅನುಸರಿಸುತ್ತಿರುವೆ ಮನಸ
ಎಲ್ಲಿಗಿದರ ಪಯಣ?
ಹೇಗಿದರ ಪಯಣ?
ಯಾಕಿದರ ಪಯಣ?
ಯಾರಿದರ ಒಳಗಿರುವ ಯಜಮಾನ?
ಎನ್ನುವ "ಕೆಟ್ಟ ಕುತೂಹಲ"ದೊಂದಿಗೆ.

ಹೊಸ ಉಪಾಯ ದೊರೆತರೆ
ಗೆಳೆಯಾ..
ತಿಳಿಸೆನಗೆ
ಮರೆಯದೆ..ಮಹರಾಯ....
-----------------------

Wednesday, February 24, 2010


........ಆಹುತಿ!


ನನ್ನ ಬದುಕಿನ ಬಂಡಿಯ
ಹೀಗೇಕೆ ಓಡಿಸಿದೆ?
ಹೇ ವಿಧಿಯೇ
ಕರ್ಣಕುಂಡಲ ಧರಿಸಿಯೂ
ಚಕ್ರವರ್ತಿಯ ಕರ್ಣಾಭರಣವಾಗುವ ಯೋಗ
ಮಾತ್ರವಾಯಿತೇ ಎನಗೆ?

ಹುಟ್ಟಿನಿಂದಲೇ ಅಲೆಯ ತೊಯ್ದಾಟಕ್ಕೆ
ಸಿಲುಕಿದ "ರಾಧೇಯ"ನಾಗಿ ನಾನು,
ನನ್ನ ಬದುಕಿನುದ್ದಕ್ಕೂ
ಗಟ್ಟಿಯಾಗಿ ನೆಟ್ಟಗೆ ನಿಲ್ಲಲೇ ಇಲ್ಲವಲ್ಲ!!

.......ಸುತ್ತಲೂ ಮೆತ್ತನೆಯ ರೇಶಿಮೆಯ ದುಕೂಲವಿತ್ತು
ವಜ್ರಾಭರಣಗಳಿತ್ತು ಮುಚ್ಚಿದಪೆಟ್ಟಿಗೆಯ ಒಳಗೆ
ಅದರೆ ಅಮ್ಮಾ,.....
ನದೀತಟದಲ್ಲಿ ಮರಳಿನಾಟವ ಆಡುವ ಮಕ್ಕಳಂತೆ
ಆಡಿ ನನ್ನ ಪಡೆದು
"ಭಾರತದ" ಗಂಗೆಗೆ ದೂಡಿಬಿಟ್ಟ ನಿನ್ನಲ್ಲಿರವಷ್ಟಾದರೂ
ಕರುಣೆಯಿತ್ತೇ?
ಕೇಳಿದ್ದೆ ನಾನು...
ಜಗತ್ತಲ್ಲಿ ಕೆಟ್ಟಮಕ್ಕಳು ಹುಟ್ಟಬಹುದು
"ಕುಮಾತಾ ನ ಭವತಿ" ಅಂತ
ನೀನೇನಾಗಿಹೋದೆ ಕುಂತೀ
ಜಗತ್ತಿನ ಮೊತ್ತಮೊದಲ ಕೆಟ್ಟತಾಯಿ
ಎಂಬ ಬಿರುದು ಹೊತ್ತುಕೊಂಡಲ್ಲೇ ಕುಂತು ಬಿಟ್ಟೆಯಲ್ಲೇ!!!

ಸೂತಪುತ್ರ,ಅಧಿರಥನ ಮಗ,
ವಸುಷೇಣನಾದರೂ
ಪರಶುರಾಮರ ಮಾನಸಪುತ್ರನಾದರೂ
ನನ್ನ ಅಂಧಕಾರವನ್ನು ಕಳೆಯಬಲ್ಲ ವಿದ್ಯೆ
ದೊರೆಯದೇ ಹೊಯಿತೇ..

ಅಂಗರಾಜ್ಯದ ಅಧಿಪತಿ
ಆಗಿ ತಲೆಗೆ ಕಿರೀಟ ಬಂದರೂ
ಜನರ ಕಿವಿಗಳಿಗೆ ಪ್ರೀಯನಾಗಿ
"ಕರ್ಣ"ನಾದರೂ
ಕಿರೀಟಿಗೆ ಸಮನಾಗಲಿಲ್ಲವಲ್ಲ!

ಅಂಬೆ ಅಂಬಾಲಿಕೆಯರ
ಅಜ್ಜ ಭೀಷ್ಮ
ಹೊತ್ತುತಂದಂತೆ
ಆವಂತಿಯ ಚಂದ್ರಮತಿ, ಭಾನುಮತಿ,ಸುರಸೆಯರ
ಸುಯೋಧನನಿಗೆ ತಂದೊಪ್ಪಿಸಿ ರಾಜನಿಷ್ಠೆಯ ಮೆರೆದರೂ
ದೊರೆಯಮನ್ನಣೆ ದೊರೆತುದಷ್ಟೇ..ಬಿಡಿ

ಯುದ್ಧರಂಗದವರೆಗೂ ಬೆಂಬಿಡದೆ ಬಂದ ಬಿರುದು
"ಮಹಾರಥಿ"
"ದಾನಶೂರ ಕರ್ಣ" ಎನ್ನುವುದೇ ಮುಳುವಾಯಿತೇ ಎನಗೆ?

ಒಳಹೊಕ್ಕರೆ ಹೊರಬರಲರಿಯದ
ಚಕ್ರವ್ಯೂಹದಲಿ ಅಭಿಮನ್ಯುವ ತರಿದ
ಅಪವಾದ ಬಂದದ್ದು
ನಿಜವಾದರೂ.....
ನಿಜಕ್ಕಾದರೂ,,
ಆ ಚಕ್ರಿಯಲ್ಲವೇ
ಮಹಾಭಾರತದ ಅನೂಹ್ಯ
ಚಕ್ರವ್ಯೂಹವ ಹೆಣೆದದ್ದು!
ಈ ಕರ್ಣನ ಬದುಕಿಗೆ?

ಹಾ!!
ವಿಧಿಯ ವಿಡಂಬನೆಯೆ!!

ಕುರುಕುಲ ಸಂಜಾತ,ಸೂರ್ಯಪುತ್ರ...
ಪಾಂಡವರಲ್ಲಿ ಹಿರಿಯ ನೀನು
ಎಂದ ಗೊಲ್ಲನಲ್ಲವೇ ನನ್ನ ಕೊಂದದ್ದು?
ಕೆಟ್ಟತಾಯಾಗಿಯೂ,ಇದ್ದ ನಾಚಿಕೆ ಮಾನ ಮರ್ಯಾದೆಯೆಲ್ಲವ ಬಿಟ್ಟು
"ತೊಟ್ಟಂಬ ತೊಡದಿರು"ಎಂಬ ವಚನವ ಪಡೆದು,
ನೀನಲ್ಲವೇ ನನ್ನ ಕೊಂದದ್ದು?

ಹೇಳು ಹಸ್ತಿನೆಯರಸಿ,ಲೊಕಮಾತೆ!!!

ಸಾರಥಿಯ ಕೈಗೂಸಾಗಿ ಬೆಳೆದೂ
ಸಾರಥಿ ಇಲ್ಲದೆ,
ರಕ್ತ ಮಾಂಸದ ಕೆಸರಲ್ಲಿ ಹೂತು ಹೋದ
ರಥಗಾಲಿಯ ಬರಿಕೈಯಿಂದ,ಓರ್ವನೇ
(ಕವಚವ ದಾನವಿತ್ತು,)ಎತ್ತುತ್ತಿರುವಾಗ
ಯುದ್ಧ ನಿಯಮವ ಮುರಿದು
ಹೊಡಿ ಕರ್ಣನ ಎದೆಗೆ ಎಂದದ್ದು ಯಾವ ನ್ಯಾಯ ಹೇಳು?

ಕುಂತಿಯಿಂದ
ಕೃಷ್ಣನವರೇಗೆ
ಎಲ್ಲರೂ ಬಳಸಿ ಎಸೆದ
ಈ ಕರ್ಣನ ಬದುಕು
ಯಾಕೆ,ಯಾರಿಗೆ
..........ಆಹುತಿ ಹೇಳಿ...

---------------------------

Tuesday, February 9, 2010

ಬೇಕು ಕಣೆ ಇಂದು ನಿನ್ನಂಥವರೇ..
---------------------------


ಮಂಥರೆ
ನಿನ್ನಿಂದಾಗಿ ನಡೆದದ್ದೇನು ರಾಮಾಯಣ?

ಹೇಳು ಮಂಥರಾ,
ಯಾಕೆ ಹೊಸೆದೆ ಈ ರೀತಿ ಬತ್ತಿ?
ಮುದ್ದಿನ ರಾಣಿಯ ಅಃತಪುರದ ಅಂತರಂಗದಲ್ಲಿ?

ನೀನು ಹಿಂಡಿದ ತೊಟ್ಟು ಹುಳಿಯಿಂದಾದ್ದದೇನು?
ಹಿಡಿಯಬೇಕಾಯಿತೇ
ರಾಮ ಕಡೆಗೊಲು
ಎತ್ತಿ ಹಿಡಿಯಲು ನಡೆನುಡಿಯ
ಮೇಲ್ಪಂಕ್ತಿ ನವನೀತ!

ಅರಿವಿತ್ತೇ ನಿನಗೆ
ಅರಿವುಗೆಟ್ಟ ಮತಿಹೀನ ಮನಸ್ಸುಗಳ
ಮಡುಹಿ
ರಾಮ
ರಾಜ್ಯವ ಕಟ್ಟುವನೆಂದು?

ಹದಿನಾಲ್ಕು ವರುಶದಲಿ
ಹಾದಿತಪ್ಪಿದ ನಾಲ್ಕು ದಿಕ್ಕಿನ ಲೊಕದಲ್ಲಿ
ರಾಮ
ಬಾಣದ ರೀತಿ
ಮಾಡುವನು ಲಕ್ಷ್ಯಬೇಧವೆಂದು?

ಹೇಳು ಮಂಥರಾ,
ನಿನ್ನಿಂದಾಗಿ ನಡೆದದ್ದೇನು ರಾಮಾಯಣ?

ಕೇಕಯ ದಿಂದ ನಲಿನಲಿದು ಬಂದೆ
ಕೈಕೇಯಿಯ ಪಾದ ದಾಸಿಯಾಗಿ
ದಶರಥನ ಕಿರಿಯ ರಾಣಿಯ
ಹಿರಿಯ ದಾಸಿಯಾಗಿ.
ನಿನ್ನೊಳಗೆ ಅಂದೇ
ತುಂಬಿ ತಂದಿದ್ದಿಯೇನೇ
ಇಂಥ ಮಾತ್ಸರ್ಯದ ಮಾಯಾ ಮಡಿಕೆಯ!

ಆದರೆ ಮಂಥರಾ,
ಅಯೋಧ್ಯೆಯ ಅಗಸನಿಗೂ ನ್ಯಾಯ ಸಿಗುವ ಮೊದಲು
ನಡೆಯಿತು..ನೊಡು
ಭರತ
ಖಂಡದಲ್ಲೆಲ್ಲ
ಅನ್ಯಾಯ ಅನೀತಿಯ ಸಂಹಾರ?
ಅಹಲ್ಯೆ
ಶಬರಿ
ಯ ಉಧ್ಧಾರ!

ಮಂಥರೇ
ಬೇಕು ಕಣೆ ಇಂದು ನಿನ್ನಂಥವರೇ..

ನಮ್ಮ ಮನದ ವನವಾಸಕ್ಕೂ
ರಾವಣ ಮಾರೀಚ ಮಾಯಾಜಿಂಕೆಯ ಸಂಹಾರಕ್ಕೂ..
ಕೊನೆಗೆ ರಾಮ ರಾಜ್ಯದ ನಿರ್ಮಾಣಕ್ಕೂ..

ಮಾತ್ಸರ್ಯವೇ ಮೈಯಾದ
ಹಣ್ಣು ಹಣ್ಣು ಮುದುಕಿ..ನಿನಗೆ ಸಿಕ್ಕ
ಈ ಮರ್ಯಾದೆಯಿಂದಾಗಿಯೇ
ನನಗೆ ನಿನ್ನಲ್ಲಿ ಹೇಳಲಾಗದಷ್ಟು
ಮಾತ್ಸರ್ಯ..
ಮಂಥರಾ..
-------------

Thursday, February 4, 2010


ಗೆಳತೀ..
-----

ನೀನು ಏನೇಹೇಳು ಬದುಕನ್ನು
ಎಲ್ಲ ರಸಗಳೂ ಆಳುತ್ತವೆ.ಅಳೆದ ತೂಗುತ್ತವೆ.
ಅದ್ಭುತ ಕರುಣ ವೀರ ಶಾಂತ
ಭಯ ಭೀಭತ್ಸ ರೌದ್ರ ಹಾಸ್ಯ
ರಸಗಳ ತೂಗಿ ತೊನೆಯುವ
ಅಲೆಗಳುಯ್ಯಾಲೆಗಳು ಜೊಕಾಲಿಯಾಡುತ್ತವೆ.
ಆಡಲೇಬೇಕಾಗುತ್ತದೆ.

ಆದರೆ ಗೆಳತೀ,
ಈ ಶೃಂಗಾರ ರಸಗಳ ರಾಜ.
ವಿರಹಿಗಳಿಗೆ ಮಾತ್ರವಲ್ಲ,
ಧೀರರ ಸ್ಥಾಯೀ ಭಾವ
ಬದುಕಿನ ಆಸ್ಥಾನದಲ್ಲೊಂದು
ಶೃಂಗವಂತ.

ನಿನ್ನೆಗಳ ನೆನಪಲ್ಲಿ ಸಂತೊಷವೇಪಡು
ಆಸೆಯಿದ್ದರೆ ಕೊರಗು.
ನಾಳೆಗಳ ಕಲ್ಪನಾ ಸಾಮ್ರಾಜ್ಯದಲಿ
ವಿಹಾರ ಹೊರಡು
ಸುಖವೇ ಸಿಗಲಿ ಭಯವೇ ಭಾಧಿಸಲಿ
ಎಷ್ಟಾದರೂ ಇವೆಲ್ಲ
ಭೂತದ ನೆನಪು,ಭವಿಷ್ಯದ ಆಶಾದೀಪ.

ಗೆಳತೀ,
ನಿನ್ನ
ಅನುಭವಕ್ಕೆ,ಪ್ರಜ್ಞೆಯ ಅಳವಿಗೆ
ಏನಾದರೂ
ದೊರಕ ಬೇಕಿದ್ದರೆ...
ವರ್ತಮಾನದ ಬದುಕಿನ ಮೇಲೆ ಮಾತ್ರ ಗಮನವಿಡು.
ಮುಳುಗಿಯೇಳುತ್ತ
ಶೃಂಗಾರ ರಸಸಾಗರದಿ
ಅನುಭವಿಸು ಜೀವನವ
ಜೀನುಕಟ್ಟಿದ ಕುದುರೆಯ
ಅಬ್ಬರದ ಆನಂದವ
ತಳಮುಟ್ಟ ಹೀರಿ..

ಬಂದಕಾರ್ಯದಿ ತೊಡಗು
ಮನಸ ಮಣಿಸುತ್ತ..
ಕುಣಿದು ಕುಣಿಸುತ್ತ..
..ಗೆಳತೀ..
---------------