Sunday, October 24, 2010



ರೂಪಾಂತರ
-----------

ಬೀಜದೊಳಗಿದ್ದೆನೋ?
ಗೊತ್ತಿಲ್ಲ..
ಬೀಜ ಲಯವಾಗಿ
ಮೊಳಕೆ ಚಿಗುರಾದೆ.

ಚಿಗುರೊಳಗಿದ್ದೆನೋ?
ಗೊತ್ತಿಲ್ಲ..
ಚಿಗುರು ಚಿರುಟಿ
ಗಿಡವಾಗಿ ಮೇಲೆದ್ದೆ.

ಮೇಲೆ..ಮೇಲೆ
ಒಂದಕ್ಕೆ ಎರಡಾಗಿ
ಎರಡು ನೂರಾಗಿ
ಸಾವಿರಾರು ಟಿಸಿಲೊಡೆದು
ಲಕ್ಷ ಲಕ್ಷ ಎಲೆ ಬೆಳೆದು.

ಉದುರಿ ಉದುರಿ
ಮೆತ್ತೆ ಬೆಳೆಯುತ್ತಾ
ಹೂವಾಗಿ ಅರಳಿನಿಂತೆ..
ಅರಳಿ ಮುದುಡಿದ್ದೇ..
ಕಾಯಾದೆ..

ಕಾಯ ಕಹಿ/ದೊರಗು
ರುಚಿ ಕಳೆದು....
ರುಚಿತುಂಬಿ ಹಣ್ಣಾದೆ,ಜಗದ ಕಣ್ಣಾದೆ.

ಉದುರಿ ಅಲ್ಲಿಯೇ ಕೊಳೆತು
ಬೀಜವಾದೆ..
ಕಾಯುತ್ತಿರುವೆ ಎಂದಿಗೋ
ನನ್ನ ವಾಯಿದೆ???
--------------

Friday, October 15, 2010




ಆರು ಚಕ್ರದ ಅಂದದರಮನೆ.
-----------------------
ಮತ್ತೆ ಕರೆಯಬೇಡ ಕಣೆ,ನೀನು ಕಾಮಿನಿ,
ಕಾಮನ ಅರಗಿಣಿ,
ಕಡೆಗಣ್ಣನೋಟದಲಿ ಕೆಣಕಿ, ನನ್ನಲ್ಲಿ
ಆರುತ್ತಿರುವ ಕಿಚ್ಚನ್ನು ಕೆದಕ ಬೇಡವೇ..

ನನ್ನೆದುರಿನ ಚಿನ್ನದ ಚಿಗರೆಯಾಗಿ
ಆಸೆಯ ಉರಿಗೆ ತಿದಿಯೂದಿ
ಭಾವ ಬದಲಾಗಿ,ಕ್ರೋಧ ಹುಟ್ಟಿ
ಕೋಪದ ಕೈಗೊಂಬೆಯಾಗಿಸ ಬೇಡ ಕಣೇ..

ನಿನ್ನಪಡೆಯುವ ಹರ ಸಾಹಸದ
ವೆಚ್ಚಕ್ಕೆ ಹೊನ್ನ ಕೂಡಿಡುವ
ಲೋಭಿಯಾಗಿಸಬೇಡವೇ...ಚಿನ್ನಾ..

ಮೋಹದ ಮಾಯಾ ಮುಸುಕನ್ನು ಮುಚ್ಚಿ,
ಮರೆಸುತ್ತ ಲೋಕದ ರೀತಿನೀತಿಯ
ಚೌಕಟ್ಟಿನಿಂದಾಚೆಗೆ ಸೆಳೆಯಬೇಡವೇ..
ಮೋಹನಾಂಗೀ..

ಆಮೋದ ಪ್ರಮೋದದ
ಹಳೆನೆನಪನುದ್ದೀಪಿಸಿ,
ಮದ ತುಂಬಿ,ಉನ್ಮತ್ತನನ್ನಾಗಿಸ ಬೇಡ
ಕಣೇ..ಮದಗಜಗಾಮಿನಿ.

ನಿನ್ನೆಗಳ ಮರೆಯುವ ಪ್ರಯತ್ನಕ್ಕೆ
ಮಾತ್ಸರ್ಯದ ಸವತಿಯಾಗಿ ಕಾಡಬೇಡವೇ..
ಕನಸಿನ ಕನಕಾಂಗಿ..
ಕಾಡಿ ನೂಕದಿರು ಮತ್ತೊಮ್ಮೆ ನನ್ನ
ಜೀವನದ ಜೋಕಾಲಿಗೆ...
ಅರಿವು ಮರೆಸುವ ಆರು ಚಕ್ರದ ಅಂದದರಮನೆಗೆ...
------------------------