Friday, January 29, 2010

ಗೆಳೆಯಾ..
ನೋವೇ ದೊರೆತರು ನಿನಗೆ
ಮಾಡಿಕೊಳ್ಳ ಬೇಕಲ್ಲ ಅದನ್ನು ಮುತ್ತಿನ ನತ್ತು.
ಸುಖದ ಮುತ್ತು.
ಶರೀರಕ್ಕಾದರೆ ನೋವು ಮಾಯದೇ
ದಿನ,ದಿನಗಳಲ್ಲಿ,ತಿಂಗಳುಗಳಲ್ಲಿ.
ಒಂದಷ್ಟು ಸಮಯದಲ್ಲಿ
ಆಗದದು ಸ್ವಾತಿ ಹನಿ.
ದೊರೆಯದು ಕೆನೆಕಟ್ಟಿ ಮುತ್ತು!

ಮನದೊಳಗೆ ಇಳಿಯ ಬೇಕು ಸುಳಿ ಸುತ್ತಿ ನೋವು.

ಘಟನೆಗಳು,ಸಂಗತಿಗಳು
ಭಾವನೆಗಳ ಭಾವಲೋಕಕ್ಕೆ ಕನ್ನವಿಕ್ಕಿ
ಕೊರೆಯಲಾರಂಬಿಸಿದರೆ
ತಿರುಳ ಕೊರೆವ ಮರಿದುಂಬಿಗಳು.

ಕದತೆರೆಯದಿದ್ದರೆ
ಮನದೊಳಗೆ
ಕೆಂಪುಗಂಬಳಿ ಹಾಸಿ
ಕರೆಯದಿದ್ದರೆ ಒಳಗೆ
ಸುತ್ತಬೇಕಷ್ಟೆ ತಾನೆ ಹೊರಗೆ ಸುತ್ತು ಪೌಳಿಯಲ್ಲಿ?

ಸುತ್ತ ಸುತ್ತಲಿ ಬಿಡು ಅದರ ಜಾಡು ಅದೇಹಿಡಿದು.
ಎಂದರಾಗದು ಗೆಳೆಯಾ

ಮೊಹಗೊಂಡು ಅದರ ಸ್ವರ ಮಾಧುರ್ಯಕ್ಕೆ,ಮಧುರಾಲಾಪಕ್ಕೆ
ಶೃತಿ ಸೇರಿಸಿದೆಯಾದರೆ ಸಾಕು
ಮತ್ತೆ ಅದು ಲಕ್ಶ್ಮಣರೇಖೆ ದಾಟಿದ ಸನ್ಯಾಸಿಯೇ ಸರಿ.

ಸ್ವರ್ಣ ಲಂಕೆಯಲ್ಲೂ
ಶೋಧಿಸು ಮೂಲವನು
ಕಾರ್ಯ ಕಾರಣ ಕಾರಕವನು
ಆನಂದಿಸು ಮರಿದುಂಭಿಯ
ಮಧುರ ಮರುಳ ಮೊರೆತವನು

ಸಡಿಲಿಸು ಪಟ್ಟು, ಬಿಟ್ಟು ಬಿಡು
ನೋವು ತಿನ್ನ ಬೇಕೆನ್ನುವ ಹುಚ್ಚು

ಅನುಭವಿಸು
ಕುಣಿ,ಕುಣಿಸು
ಅದರ ತಾಳಕ್ಕೆ ನೀನು,ನಿನ್ನ ತಾಳಕ್ಕೆ ಅದು.
ಆಗ
ಅದೊ
ನೋವಿನಾಳದ
ಸಮುದ್ರದಲ್ಲೂ ಸುಖದ ಮತ್ತು
ಅಲ್ಲ ..ಮುತ್ತು!
ಮಾಡಿಕೊ ನತ್ತು!
------------------

Saturday, January 23, 2010


ತೃಪ್ತಿ,
ನಿನಗಾಗಿ ಹಂಬಲಿಸಿ ಕಾದಿರುವೆ
ನೀನೇಕಿನ್ನೂ ಮರೀಚಿಕೆಯಾಗಿರುವೆ ಹೇಳು?

ಹುಡುಗುತನದ ಹುಡುಗಾಟದ ಬಾಲ್ಯದಲ್ಲಿ
ಮನೆಯಂಗಳದ ಒಳಗೆ ಹೊರಗೆ
ಅಚ್ಚರಿಗಳ ಅರಿವಿನ ಆಚೆ ಈಚೆ ಹುಡುಕಿದ್ದು
ನಿನ್ನನ್ನೇ ಅಲ್ಲವೇನು?

ತೊಳೇರಿಸುವ ತಾರುಣ್ಯದ ತೊಟ್ಟಿಲಲ್ಲಿ
ನನ್ನೂರು ಪರವೂರು ಹತ್ತೂರುಗಳಲ್ಲಿ
ಕತ್ತಲಿನ ಗುಹೆಗಳಲ್ಲಿ,ಗೊಂಡಾರಣ್ಯದಲ್ಲಿ
ಅದರ್ಶಗಳ,ಗಾಜಿನರಮನೆಯ ಅಂತರ್ಯದ ನೆಲಮಾಳಿಗೆ ಯೊಳಗೆ
ತಡಕಾಡಿದ್ದು ನಿನ್ನ ಬೆಚ್ಚನೆಯ ಅಪ್ಪುಗೆಯ ಬಿಸುಪಲ್ಲಿ
ಕರಗಿ ನೀನೇಆಗಬೇಕಂದಲ್ಲವೇ ಹೇಳು?

ತೃಪ್ತಿ,
ಕನಸಿನ ಕನ್ಯೆಯೋ,ಅಂಬರದ ಅಪ್ಸರೆಯೋ.
ನೀನೆಲ್ಲಿ ಹೋದೆಯೇ,ಕನ್ನಡಿಯೊಳಗಿನ ಕಿನ್ನರಿ?
ತುಂಬು ಸಂಸಾರದ,ಸಡಗರದ,ಜಾತ್ರೆಯ ನಡುವೆ
ನಿನ್ನದೊಂದು ಕಡೆಗಣ್ಣನೊಟವೂ ಇಲ್ಲದಾಯ್ತೇ ಗೆಳತಿ?
ಆಸೆ,ಮಾತ್ಸರ್ಯಗಳೆಂಬ ಸವತಿಯ ಕಾಟಕ್ಕೆ,
ದುಡ್ಡಿನ ಗುಡ್ಡವನೊಟ್ಟುವ,ಬಿರು ಬಿಸಿಲ ಕಾಯಕಕ್ಕೆ ಹೆದರಿ ಬೆದರಿ
ಮಾಯವಾದೆಯೇನೇ?

ತೃಪ್ತಿ,
ಒಡಲ ಜೀವ ಚೈತನ್ಯವೇ
ಇನ್ನಾದರೂ ಬರಲಾರೆಯಾ,ನೆಮ್ಮದಿಯ ನೆರಳಾಗಿ,
ಭಾವದ ಗೆಳತಿಯಾಗಿ,ತಂಪೆರೆವ ತಾಯಾಗಿ,ತಣ್ಣನೆಯ ತನುವಾಗಿ?

ಹೊರಟಿಹೆನು ಇಂದು,ಹೊಗದೂರಿಗೆ ಒಂಟಿಯಾಗಿ...
ಅರೆ!
"ಒಬ್ಬಂಟಿಯಲ್ಲವೋ ಮೂಢ ನಾನಿರುವೆ ನಿನ್ನೊಳಗೆ,
ನಿನ್ನೆದೆಯ ಒಳಗೇ"

ತೃಪ್ತಿ,
ಹೊರಗೆ ಊರೆಲ್ಲ,ಅವರಿವರ ಬಳಿಯೆಲ್ಲ,ನೀನಿರುವೆಯೋ ಎಂದು
ಅರಸಿದ್ದು ಹುಸಿಯಾಯಿತೇ?...
ಅರಿವಾಯಿತೇ ಇಂದು!

ನಿನ್ನಿರವು ನನ್ನರಿವಾಗಿ,ಬಲವಾಗಿ ಹೆಪ್ಪುಗಟ್ಟುತ್ತಿದ್ದರೆ,ಹಾರಾಡಬಹುದಿತ್ತಲ್ಲವೇ
ಅನಂತ ಆಕಾಶದಲಿ ಜೋಡಿ ಹಕ್ಕಿಯಾಗಿ!?

ಇರಲಿ ಬಿಡು.ಈಗಲಾದರೂ ಬಂದೆಯಲ್ಲ,ಅಲ್ಲ
ಅರಿತೆನಲ್ಲ..ತೃಪ್ತಿ
ನೀನಿರುವೆ ಜೊತೆಯಾಗಿ,ಆನಂದ ಪಯಣದಲಿ
ಜೊತೆಗಾತಿಯಾಗಿ..
-----------------

Saturday, January 16, 2010
ನನ್ನ ಮಾಲಿಕನೇನೊ ನೀನು?

ಇದುವರೆಗೆ ಕಂಡಿಲ್ಲ,ನಿನ್ನ ನುಡಿ ಕೇಳಿಲ್ಲ!

ಇಲ್ಲಿ ಎಲ್ಲ
ಸ್ವಯಂಘೋಷಿತ ಮೇಸ್ತ್ರಿಗಳದ್ದೇ ಆಟ.

ಕೆಲಸ ಹೇಳುವುದೇನು? ಹೊರೆ ಹೊರಿಸುವುದೇನು?

ನನ್ನ ಪಾಡು
ಅಗಸನ ಅನುಚರನಿಗಿಂತಲೂ ಕಡೆಯಾಯಿತಲ್ಲ;

ಡೊಗ್ಗು ಸಲಾಮು ಹೊಡೆದು
ವಂಧಿಮಾಗಧನಾಗಿ ನಾನಿಲ್ಲಿ ಬಂಧಿ,
ನೀನೇಕೆ ಅಲ್ಲಿಯೇ ನಿಂದಿ?

ಬೇಡ ದೊರೆಯೇ ಬೇಡ..
ದೂರದೂರಿನ ಮಾಲಕನಾಗಿ
ನನ್ನ
ಅವರಿವರ ತಾಳಕ್ಕೆ
ಕುಣಿಸ ಬೇಡ.ನೀ ಅವಿತು ನೋಡಬೇಡ.

ಒಮ್ಮೆ ಬಂದು ನೋಡಿಲ್ಲಿ ನನ್ನ ಅವಸ್ಥೆ

ಈ ಬುದ್ಧಿವಂತ ಜನ ನಾಯಕರ,
ಮಠ ಮಂದಿರದ ಠಕ್ಕು ಸ್ವಾಮಿಗಳ,
ಬೈಠಕ್ಕು ಮಾಡುವ ಉಗ್ರ ದೇಶ ಪ್ರೇಮಿಗಳ,
ಅತ್ಯುಗ್ರ ಧರ್ಮಾಭಿಮಾನಿಗಳ,
ಹಿಂಡು ಹಿಂಡಾಗಿ ಬಂದು
ಎತ್ತೆತ್ತಲೋ ಒಯ್ಯುವ
ಅಭಿಮಾನಿ ದೇವತೆಗಳ,
ಕೈಯಲ್ಲಿ ಸಿಕ್ಕಿ ನರಳುತ್ತಿರುವೆ ತಂದೆಯೇ..

ಹಕ್ಕು ಕರ್ತವ್ಯಗಳ ಹೆಸರಲ್ಲಿ
ನೀತಿ ಅನೀತಿಗಳ ಬಲೆಯಲ್ಲಿ ಸುತ್ತಿ
ಒತ್ತಿ,
ಉಸಿರುಗಟ್ಟಿಸಿ, ಸಮಾಧಿಕಟ್ಟಿಸಿ,ಹುತಾತ್ಮನನ್ನಾಗಿಸಿ,
ವೀರಗಲ್ಲಲ್ಲಿ ಹೆಸರ ಬರೆಯುತ್ತಿರುವರಯ್ಯೋ
ದನಿಯೇ, ನನ್ನ ದನಿ ಕೇಳುತ್ತಿಲ್ಲವೇ?...

ಕಣ್ಣನಿತ್ತೂ ನೀ ನೋಡದ
ಕಿವಿಯಿತ್ತೂ ನೀ ಕೇಳದ
ನುಡಿಯಿತ್ತೂ ನೀ ನುಡಿಯದ
ಬಾಯಿಯನಿತ್ತೂ ನೀ ಮಾತನಾಡದ
ನೀನೂ ಒಬ್ಬ ಮಾಲಕನೇನೋ?

ದೂರದೂರಲ್ಲಿ ಕುಳಿತು
ನನ್ನ ಜೀತಕ್ಕಿಕ್ಕ ಬೇಡ.

ಬಿಡುಗಡೆಯ ಕರುಣಿಸೋ
ಇಲ್ಲಾ..
ನನ್ನನ್ನೇ
ನಿನ್ನಂತೆ ಒಡೆಯನನ್ನಾಗಿಸೋ..

ದೂರದೂರಿನ ಮಾಲೀಕನೇ
ಬಾರಯ್ಯ ತಂದೇ ನನ್ನ ಬಳಿಗೆ.
ಏನಯ್ಯ ತಂದೇ? ನನ್ನ ಬಾಳಿಗೆ?
ಎನ್ನುವಂತಾಗಿಸ ಬೇಡವೋ ದೊರೆಯೇ..

ನನ್ನ ಮಾಲೀಕ ನೀನೇ ಏನೋ???
-------------

Wednesday, January 13, 2010


ಮೊಲ ಮತ್ತು ಆಮೆ
--------------


ಅನಿರೀಕ್ಷಿತವಾಗಿ
ತುಂಬ ಸಮಯದಿಂದ ನಿರೀಕ್ಷಿಸಿದ್ದ
ಆಮೆ
ಒಂದು ಸಿಕ್ಕಿತು.
ಸಿಹಿ ನೀರಿನ ಬಾವಿಯಲ್ಲೇ ಇತ್ತೋ?
ಪಾರವಿಲ್ಲದ ಸಮುದ್ರದಿಂದ ಬಂತೋ?
ಅಂತೂ ಬಂದ
ಆಮೆ
ಈಗ ಮನೆಯೊಳಗೇ ಮನೆ ಮಾಡಿದೆ.

ಆಮೆ
ನಡಿಗೆ ಎಂಥ ಚಂದ!
ಒಂದೊಂದೇ ಪುಟ್ಟ ಪುಟ್ಟ ಕಾಲನ್ನು ಊರಿ,
ನಿಧಾನಕ್ಕೆ ತಲೆ ಹೊರಗೆ ಹಾಕಿ,ಮೇಲೆ ಎತ್ತಿ,ಅಕ್ಕ ಪಕ್ಕ ನೋಡಿ,ಕಣ್ಣು ಹೊರಳಿಸಿ,
ಮುಂದೆ ಮುಂದೆ ಹೋಗುವ ಅಂದವೇ ಅಂದ.

ತಿನ್ನುವ,ಮೂಸುವ,ಮುಟ್ಟುವ.ಕೇಳುವ,ನೋಡುವ,
ಎಲ್ಲವೂ ಬೇಕು ಇದಕ್ಕೆ!
ಎಷ್ಟು ಬೇಕೆಂದರೆ ಇನ್ನೂರು ವರ್ಷ..
ಬದುಕುತ್ತಂತೆ...
ಅದಕ್ಕೇ
ಆಮೆ
ಎಲ್ಲರಿಗೂ ಇಷ್ಟ.

ಭೂಮಿಭಾರ ಹೊರುವಷ್ಟು ಗಟ್ಟಿ ಚಿಪ್ಪಲ್ಲಿ ನಕ್ಷತ್ರ ಇದ್ದರೆ
ಜಗತ್ತಿನಲ್ಲೆಲ್ಲಾ ಭಾರೀ ಬೆಲೆಯಂತೆ.
ಹೊರಗಿನ ಗಟ್ಟಿಯಷ್ಟೇ ಒಳಗೆ ಮೆತ್ತಗೆ ನೋಡು.
ಅದಕ್ಕೇ ಮನುಷ್ಯನಿಗೆ ನೀನೆಂದರೆ ಅಕ್ಕರೆ.

ಮುಂದೆ ಮುಂದೆ ಓಡಿದ ಮೊಲ,
ಸುಸ್ತಾಗಿ ಮಲಗುವುದು ಖಂಡಿತ.
ಕೊನೆಗೂ ಜಯ ನಿನಗೇ.
ಅದಕ್ಕೇ
ಆಮೆ
ನೀನಾಗು ನಮ್ಮೆಲ್ಲರ ಸಂಗಾತಿ.
ಜೊತೆ, ಜೊತೆಯಲ್ಲೇ
ಅನುಭವಿಸುತ್ತಾ..ಬದುಕನ್ನು ಪೂರ್ತಿ ಆನಂದಿಸೋಣ.
ಅವಸರದ,ವೇಗಿ,ಸುಂದರಿ ಆದರೂ
ಮೊಲವನ್ನು
ಕಳಿಸೋಣ, ದೂ....ರ. ಕಾಡಿಗೆ.
ಆಮೆ
ಇರಲಿ ನಾಡಿಗೆ.
------------

Wednesday, January 6, 2010


ನೆಮ್ಮದಿ..ಬೇಕಿದ್ರೆ...
-----------------


ನಿಜಕ್ಕೂ ಅವರಿಗೆ ನನ್ನ ಬಗ್ಗೆ ಪ್ರೀತಿಇದೆಯಾ?
ಇವರಿಗೆ ತುಂಬಾ ಮತ್ಸರಪ್ಪಾ..
ಅವನು ನಿಜವಾಗಿ ನನ್ನ ಕೆಲಸ ಮೆಚ್ಚಿ ಹೇಳಿದ ಮಾತಲ್ಲ ಇದು.
ಅವನಿಗೆ ಖಂಡಿತ ನನ್ನ ಬಗ್ಗೆ ಒಳಗೊಳಗೇ ಅಸಮಧಾನ.ಎದುರಿಗೆ ತೋರಿಸಿಕೊಳ್ಳೊದಿಲ್ಲ ಅಸ್ಟೇ..
ನಮ್ಮನ್ನೇ ಗಮನಿಸುತ್ತಾ ಇರ್ತಾರೆ..
ನನಗೆ ತುಂಬಾ ಗರ್ವ,ಜಂಬ ಅಂತ ಗ್ರಹಿಸಿದ್ದಾನೆ/ಳೆ.
ಇದೆಲ್ಲಾ ಎದೆಯಾಳದ ಮಾತ?
ಹೀಗೆ...
ನಾವು ಇನ್ನೊಬ್ಬರು ನಮ್ಮ ಬಗ್ಗೆ ಏನು ಯೋಚಿಸುತ್ತಿರಬಹುದು ಅಂತ ಯೋಚಿಸುವುದು ಎಷ್ಟರಮಟ್ಟಿಗೆ ಸರಿ?
ಅಲ್ಲಾ..ಇನ್ನೊಬ್ಬರ ಮನಸ್ಸಿನಲ್ಲಿ ಏನಿರಬಹುದು?
ಅವನ/ಳ ಯೋಚನೆ ಹೀಗೆಇರುತ್ತೆ ಅಂತ ನಾವು ಹೇಗೆ ಕಂಡುಕೊಳುತ್ತೇವೆ?
ನಾವು ನಮ್ಮನಮ್ಮಲ್ಲೇ ತೀರ್ಮಾನಕ್ಕೆ ಬರುವುದು ತಪ್ಪಲ್ವೇ?
ಇನ್ನೊಬ್ಬರು ಏನು ಯೋಚಿಸ್ತಿರಬಹುದು ಅನ್ನೊ ಯೋಚನೆಯನ್ನು ನಾವು ಮಾಡದಿದ್ರೆ..ಬಹುಶಃ ನಮಗೆ ನೆಮ್ಮದಿ.ಅಲ್ವೇ?
------------------------------

ಇದೇನು ಕವನವಾ,ಗದ್ಯಬರೆಹವೇ ಅಂತ ಯೋಚಿಸಬೇಡಿ.ವಿಷಯದ ಬಗ್ಗೆ ಗಮನ ಹರಿಸಿ.
ನನ್ನ ಮನಸಿಗೆ ಅನಿಸಿದ್ದು.ಬರೆಹಕ್ಕೆ ಇಳಿದಿದ್ದು ಹೀಗೆ..ನಿಮ್ಮಲ್ಲಿ ಹಂಚಿಕೊಂಡಿದ್ದೇನೆ.

Sunday, January 3, 2010


"ಮಾತು" ನಮ್ಮ ಪ್ರೀತಿಯ ಕಂದ..
------------------

ನಮ್ಮ ಪ್ರೀತಿಯ ಮಗು,ಎಲ್ಲರಂತೆಯೇ
ಮುದ್ದು ಮುದ್ದಾದ,ಮುದ್ದು ಮಗು.


ಕವುಚಿ,ಅಂಬೆಗಾಲಿಕ್ಕಿ,ಹಿಂದೆ ಹಿಂದೆ ಸರಿದು,ಕುಳಿತು
ತ್ತ..ತ್ತಾ..ಅ..ಆ..ಅಮ್ಮಾ ಅಪ್ಪಾ ಎನ್ನುತ್ತಾ ಎದ್ದು
ಪುಟು ಪುಟು..ಹೆಜ್ಜೆ ಹಾಕುತ್ತ ನಡೆದಾಗ,
ಸಂತಸಪಟ್ಟು,ಪೊಟೊ ತೆಗೆದು ಸಂಭ್ರಮಿಸಿದ್ದೇನೆ.

ಆಟ ಪಾಟ,ಶಾಲೆ ಮುಗಿಸಿ,
ಎಲ್ಲ ಬೇಕುಗಳ ಆಸೆಪಟ್ಟು,
ಹಟಹಿಡಿದು,ಅತ್ತು..ಪಡೆದು
ಸಂತಸಪಟ್ಟು ..ಪಟ್ಟು,ಸುಸ್ತಾಗಿದೆ ಈಗ.

ಮಾತೆಂಬ,
ನನ್ನ ಮತ್ತಿನ ಮಗುವೇ,
ಮಲಗಮ್ಮ ಮಲಗು...
ಮಲಗಪ್ಪ ಮಲಗು..
ರಾತ್ರಿಯಾಯಿತು ಕಂದ..
ಸಾಕು ಇಂದಿಗೆ,
ಎದ್ದರೆ ನಾಳೆ ಮತ್ತೆ ಶುರುಹಚ್ಚು...

ಮಲಗು,
ಮಾತೇ..ನನ್ನ ಮುದ್ದಿನ ಮಗುವೇ..
ಮನೆಯ ಮಾಳಿಗೆಯಲ್ಲಿ ಸದ್ದಡಗಿಹೊಗಲಿ...
ಜಾರಿಕೊ..ಕನಸಿನ ಲೊಕಕ್ಕೆ ಕಂದಾ...
ಸಾಕಿಂದಿಗೆ ಸಾಕು..
ರಾತ್ರಿಯಾಯಿತು ಕಂದಾ..
-------------------------

Saturday, January 2, 2010
ಸುಮ್ ಸುಮ್ನೇ ಎಬ್ಬಿಸಿದ್ದಾರೆ ಗುಲ್ಲು!
-----------------------------


ಹೇಳ್ತಾರೆ
..ಹೇಳ್ತಾರೆ..ಸುಮ್ನೇ,
ಸುಮ್ ಸುಮ್ನೇ..ಕಿಸಬಾಯಿ ದಾಸನ೦ತೆ.

ಬಯಸಿದ್ದೆಲ್ಲ ದೊರಕುವುದಿಲ್ಲ,ದೊರಕಿದ್ದೆಲ್ಲ ಬಯಸಿದ್ದಾಗಿರುವುದಿಲ್ಲ!
ಸುಳ್ಳು..ಸ್ವಾಮೀ ಸುಳ್ಳು.
ಸುಮ್ ಸುಮ್ನೇ ಎಬ್ಬಿಸಿದ್ದಾರೆ ಗುಲ್ಲು!

ಬುದ್ದಿ ತಿಳಿದಾಗಿನಿ೦ದ....ಯೊಚಿಸಿ ನೊಡಿ..
ನೀವು ನೆನೆಸಿದ್ದು..ಆಸೆ ಪಟ್ಟಿದ್ದು,
ಆಗಿಲ್ಲವೇನು ನನಸು?

ಹೈಸ್ಕೂಲು ಮುಗಿದರೆ ಸಾಕು,ಶಿಕ್ಶೆ-ಹೊಮ್ವರ್ಕ್,
ಬಿಟ್ಟು ಯೂನಿಫಾರ್ಮ್,ಅರಾಮ ಕಾಲೇಜು,ಹೇಳೊಲ್ಲ ಯಾರೂ,
ಓದು,ಬರಿ,ಬಾಯಿಪಾಟ,ಗೊಣಗಾಟ.ಆನ೦ದದಿ೦ದ ಕಳೆಯಲಿಲ್ಲವೇ
ಐದಾರುವರ್ಷ..ಜೀವನದ ಸುವರ್ಣಯುಗ!

ದುಡಿಮೆ ಆರ೦ಭಿಸಿದರೆ ಸಾಕು.ವೆಚ್ಚಕ್ಕೆ ಹೊನ್ನು,ಬೆಚ್ಚಕ್ಕೆ ಹೆಣ್ಣು,
ತಾರುಣ್ಯದ ಆಟ,ಸ್ನೇಹಿತರ ಕೂಟ...
ಇಚ್ಚೆಯರಿತು ಬಾಳುವ ಗ೦ಡು,ಹೆಣ್ಣಿನ
ನಮ್ಮಸ೦ಸಾರ...ಆಗಿಲ್ಲವೇ ಆನ೦ದ ಸಾಗರ?

ಸಾಲ ಮಾಡಿ ಕಟ್ಟಿದ ಮನೆಯಾದರೂ,ಉರಿದಿಲ್ಲವೇ ಹೊಟ್ಟೆ,ಅಕ್ಕಪಕ್ಕ ದವರಿಗೆ?
ಸಾಲಕ್ಕೊ,ಶ್ರಾಧ್ಧಕ್ಕೋ ಅ೦ತ ತಮಾಷೆ ಮಾಡುತ್ತಾ,ಪಡೆದ ಮಕ್ಕಳೆರಡೂ,
ಬದುಕಿನ ಪಯಣಕ್ಕೆ ಪಡೆಯಲಿಲ್ಲವೇ ಗಟ್ಟಿ ರೆಕ್ಕೆ!
ಜೀವನದ ಪಯಣದಲ್ಲಿ ಹೊರಳಿ ಮರಳಿ ನೊಡಿದರೆ

ನಿಜಕ್ಕೂ ಗಳಿಸಿದ್ದೇ ಅಧಿಕ,ಕಳೆದದ್ದು ಕ್ಷಣಿಕ.
ತು೦ಬಿದ ಮುಕ್ಕಾಲು ಪಾಲಿಗಿ೦ತಲೂ ಹೆಚ್ಚೇ?
ಖಾಲಿ ಕಾಲು ಪಾಲು?

ಸುಮ್ನೇ... ಸುಮ್ ಸುಮ್ನೇ..ಎಲ್ಲರೂ ಅಳ್ತಾರೆ೦ತ,
ಅಳ್ಬೇಕೆ..ನಾವು ನೀವೂನು?

"ರಾ" ಎ೦ದರೆ ರಾಮಾಯಣ ತಿಳಿವ,
ತಮಗೆ ಗೊತ್ತಿಲ್ಲದ್ದೇನು?..

~~~~~~~~~~~~