Sunday, July 25, 2010



ಮರೆವೆನೆ ಜೊತೆಯ?
--------------
ಕತ್ತಲ ಕಳೆಯಲು
ತಿಂಗಳ ಚಂದಿರ
ತಿಣುಕಾಡುವ
ಪರಿಯನು ಕಾಣುತ,

ಚುಕ್ಕಿಗಳಂದವು
ಬಾಂದಳದಣ್ಣ..
ನಾವಿರುವೆವು ಜೊತೆಗೆ.

ಜೊತೆಯಿದ್ದರೆ ಕೆಲಸವು ಹಗುರ
ಮನಸು ನಿರಾಳ.

ನಿಶಾದೇವಿಯ ಅಪ್ಪುತ,ತಬ್ಬುತ
ನಿದ್ದೆಗೆ ದೂಡುತ
ಚಂದಿರ ತಂದ
ಬೆಳದಿಂಗಳ ಚಂದ...

ಚುಕ್ಕಿಯ ಚಿಣ್ಣಗೆ
ಕಣ್ಣನು ಮಿಣುಕಿಸಿ
ಚೆಲ್ಲುತ ಬೆಳಕನು
ಚಂದಿರ ಅಂದ...

ಪ್ರೀತಿಯ ನೀಡಿ..ಜೋಡಿಸಿ ಕೈಯನು
ಜೊತೆಯಲಿ ನಿಂದಾ
ನಿಮ್ಮನು ಮೆರೆಸುವೆ ಆಗಸದೆತ್ತರ..
ಮರೆವೆನುಎಂತೂ..
ಮರೆಯೆನು ಎಂದೂ..

ಮರೆಯದೆ ಜತೆಯ
ಮೆರೆಯುವ ನಭದಿ
ಜೊತೆಯಲಿ ನಿಂದು
ಎಂದೆಂದೂ...
++++++

Thursday, July 15, 2010

Gregory Patrao :: Homestead Demolition

Sunday, July 4, 2010



ಯಾರ ಕೃಪೆಯ,
ಯಾವಕಾಲದ ಮಹಲೋ?
--------------

ಸಾವಿರದ ಸಮಸ್ಯೆಗಳಿಗೆ,
ಪರಿಹಾರ
ಎಲ್ಲರಿಗೂ....ಎಲ್ಲ ಕಾಲಕ್ಕೂ ಎಲ್ಲೆಡೆಯೂ,
(ಕಾಲ ದೇಶಾತೀತವಾಗಿ)
ದೊರಕಿದ್ದರೆ....
ಇಲ್ಲೇ ಅಲ್ಲವೇ?

ಕಾಲ! ಅಹಾ,
ಅದೆಂತಹ ಕಲ್ಪನೆ!
ಪ್ರಕೃತಿಯೊಂದಿಗಿನ ಸಹಬಾಳ್ವೆಗಾಗಿ
ಹಗಲು ರಾತ್ರಿಯ ಚಕ್ರಕ್ಕೆ
ಎಣಿಕೆ ಬರೆಯುವ ಹುಚ್ಚಿನಲ್ಲಿ
ಕಟ್ಟಿಕೊಂಡ ಸುಂದರ ಮಹಲು!

ಇಲ್ಲಿ ಪಹರಿಗಳಿಲ್ಲ, ಒಡೆಯರೂ ಇಲ್ಲ.
ಗೊತ್ತಿಲ್ಲದ ಯಜಮಾನನ ಮಾಲಕತ್ವ ಒಪ್ಪಿ
ಸಾಗಿದೆ ಬದುಕು..ನಿರಾತಂಕ,ನಿರುಮ್ಮುಳ!

ಇಲ್ಲಿ ಬೀಸುವ ಗಾಳಿಗೆ,
ಬೆಳದಿಂಗಳಿನ ಸುಖ ನಿದ್ದೆಗೆ,
ಎಲ್ಲ ಮರೆಯುವ ಮರೆಸುವ
ಅದೆಂತಹ ಶಕ್ತಿ!

ಸಮಯದ ನಾಡಿ ಹಿಡಿದು
ಹೊತ್ತು ಹೊತ್ತಿಗೆ,
ಬೇಕಾದ ಎಲ್ಲವ...
ಬೇರಾರಿಗೂ ಇಲ್ಲವೆನ್ನುವಷ್ಟು ನೀಡಿ,
ನೋವ ನೀವುತ್ತ ಮನವ ಮುದಗೊಳಿಸಿ..ಮುದ್ದಿಸಿ,
ಶಕ್ತಿತುಂಬುವ
ಅದ್ಭುತ ಮಹಲು!

ಸವೆಸಲೇಬೇಕಾದ ಬದುಕಿಗೆ
ಸಾಸಿವೆಯಷ್ಟೂ ಕೊರತೆಯಾಗದಂತೆ...
ಅದೆಷ್ಟು ಲೆಕ್ಕಾಚಾರ..
ಯೋಚಿಸಬೇಕಾದ್ದಿಲ್ಲ..
ಒಡೆಯನಿಗೊಪ್ಪಿಸಿಕೊಂಡರಾಯಿತು!

ಇಷ್ಟು ನಿಶ್ಚಿಂತೆಯ
ಮನೆಯ ಮಡಿಲು ದೊರಕಿದ್ದು
ಯಾರ ಕೃಪೆಯೋ??
---------------