........ಆಹುತಿ!ನನ್ನ ಬದುಕಿನ ಬಂಡಿಯ
ಹೀಗೇಕೆ ಓಡಿಸಿದೆ?
ಹೇ ವಿಧಿಯೇ
ಕರ್ಣಕುಂಡಲ ಧರಿಸಿಯೂ
ಚಕ್ರವರ್ತಿಯ ಕರ್ಣಾಭರಣವಾಗುವ ಯೋಗ
ಮಾತ್ರವಾಯಿತೇ ಎನಗೆ?
ಹುಟ್ಟಿನಿಂದಲೇ ಅಲೆಯ ತೊಯ್ದಾಟಕ್ಕೆ
ಸಿಲುಕಿದ "ರಾಧೇಯ"ನಾಗಿ ನಾನು,
ನನ್ನ ಬದುಕಿನುದ್ದಕ್ಕೂ
ಗಟ್ಟಿಯಾಗಿ ನೆಟ್ಟಗೆ ನಿಲ್ಲಲೇ ಇಲ್ಲವಲ್ಲ!!
.......ಸುತ್ತಲೂ ಮೆತ್ತನೆಯ ರೇಶಿಮೆಯ ದುಕೂಲವಿತ್ತು
ವಜ್ರಾಭರಣಗಳಿತ್ತು ಮುಚ್ಚಿದಪೆಟ್ಟಿಗೆಯ ಒಳಗೆ
ಅದರೆ ಅಮ್ಮಾ,.....
ನದೀತಟದಲ್ಲಿ ಮರಳಿನಾಟವ ಆಡುವ ಮಕ್ಕಳಂತೆ
ಆಡಿ ನನ್ನ ಪಡೆದು
"ಭಾರತದ" ಗಂಗೆಗೆ ದೂಡಿಬಿಟ್ಟ ನಿನ್ನಲ್ಲಿರವಷ್ಟಾದರೂ
ಕರುಣೆಯಿತ್ತೇ?
ಕೇಳಿದ್ದೆ ನಾನು...
ಜಗತ್ತಲ್ಲಿ ಕೆಟ್ಟಮಕ್ಕಳು ಹುಟ್ಟಬಹುದು
"ಕುಮಾತಾ ನ ಭವತಿ" ಅಂತ
ನೀನೇನಾಗಿಹೋದೆ ಕುಂತೀ
ಜಗತ್ತಿನ ಮೊತ್ತಮೊದಲ ಕೆಟ್ಟತಾಯಿ
ಎಂಬ ಬಿರುದು ಹೊತ್ತುಕೊಂಡಲ್ಲೇ ಕುಂತು ಬಿಟ್ಟೆಯಲ್ಲೇ!!!
ಸೂತಪುತ್ರ,ಅಧಿರಥನ ಮಗ,
ವಸುಷೇಣನಾದರೂ
ಪರಶುರಾಮರ ಮಾನಸಪುತ್ರನಾದರೂ
ನನ್ನ ಅಂಧಕಾರವನ್ನು ಕಳೆಯಬಲ್ಲ ವಿದ್ಯೆ
ದೊರೆಯದೇ ಹೊಯಿತೇ..
ಅಂಗರಾಜ್ಯದ ಅಧಿಪತಿ
ಆಗಿ ತಲೆಗೆ ಕಿರೀಟ ಬಂದರೂ
ಜನರ ಕಿವಿಗಳಿಗೆ ಪ್ರೀಯನಾಗಿ
"ಕರ್ಣ"ನಾದರೂ
ಕಿರೀಟಿಗೆ ಸಮನಾಗಲಿಲ್ಲವಲ್ಲ!
ಅಂಬೆ ಅಂಬಾಲಿಕೆಯರ
ಅಜ್ಜ ಭೀಷ್ಮ
ಹೊತ್ತುತಂದಂತೆ
ಆವಂತಿಯ ಚಂದ್ರಮತಿ, ಭಾನುಮತಿ,ಸುರಸೆಯರ
ಸುಯೋಧನನಿಗೆ ತಂದೊಪ್ಪಿಸಿ ರಾಜನಿಷ್ಠೆಯ ಮೆರೆದರೂ
ದೊರೆಯಮನ್ನಣೆ ದೊರೆತುದಷ್ಟೇ..ಬಿಡಿ
ಯುದ್ಧರಂಗದವರೆಗೂ ಬೆಂಬಿಡದೆ ಬಂದ ಬಿರುದು
"ಮಹಾರಥಿ"
"ದಾನಶೂರ ಕರ್ಣ" ಎನ್ನುವುದೇ ಮುಳುವಾಯಿತೇ ಎನಗೆ?
ಒಳಹೊಕ್ಕರೆ ಹೊರಬರಲರಿಯದ
ಚಕ್ರವ್ಯೂಹದಲಿ ಅಭಿಮನ್ಯುವ ತರಿದ
ಅಪವಾದ ಬಂದದ್ದು
ನಿಜವಾದರೂ.....
ನಿಜಕ್ಕಾದರೂ,,
ಆ ಚಕ್ರಿಯಲ್ಲವೇ
ಮಹಾಭಾರತದ ಅನೂಹ್ಯ
ಚಕ್ರವ್ಯೂಹವ ಹೆಣೆದದ್ದು!
ಈ ಕರ್ಣನ ಬದುಕಿಗೆ?
ಹಾ!!
ವಿಧಿಯ ವಿಡಂಬನೆಯೆ!!
ಕುರುಕುಲ ಸಂಜಾತ,ಸೂರ್ಯಪುತ್ರ...
ಪಾಂಡವರಲ್ಲಿ ಹಿರಿಯ ನೀನು
ಎಂದ ಗೊಲ್ಲನಲ್ಲವೇ ನನ್ನ ಕೊಂದದ್ದು?
ಕೆಟ್ಟತಾಯಾಗಿಯೂ,ಇದ್ದ ನಾಚಿಕೆ ಮಾನ ಮರ್ಯಾದೆಯೆಲ್ಲವ ಬಿಟ್ಟು
"ತೊಟ್ಟಂಬ ತೊಡದಿರು"ಎಂಬ ವಚನವ ಪಡೆದು,
ನೀನಲ್ಲವೇ ನನ್ನ ಕೊಂದದ್ದು?
ಹೇಳು ಹಸ್ತಿನೆಯರಸಿ,ಲೊಕಮಾತೆ!!!
ಸಾರಥಿಯ ಕೈಗೂಸಾಗಿ ಬೆಳೆದೂ
ಸಾರಥಿ ಇಲ್ಲದೆ,
ರಕ್ತ ಮಾಂಸದ ಕೆಸರಲ್ಲಿ ಹೂತು ಹೋದ
ರಥಗಾಲಿಯ ಬರಿಕೈಯಿಂದ,ಓರ್ವನೇ
(ಕವಚವ ದಾನವಿತ್ತು,)ಎತ್ತುತ್ತಿರುವಾಗ
ಯುದ್ಧ ನಿಯಮವ ಮುರಿದು
ಹೊಡಿ ಕರ್ಣನ ಎದೆಗೆ ಎಂದದ್ದು ಯಾವ ನ್ಯಾಯ ಹೇಳು?
ಕುಂತಿಯಿಂದ
ಕೃಷ್ಣನವರೇಗೆ
ಎಲ್ಲರೂ ಬಳಸಿ ಎಸೆದ
ಈ ಕರ್ಣನ ಬದುಕು
ಯಾಕೆ,ಯಾರಿಗೆ
..........ಆಹುತಿ ಹೇಳಿ...
---------------------------