Wednesday, February 24, 2010


........ಆಹುತಿ!


ನನ್ನ ಬದುಕಿನ ಬಂಡಿಯ
ಹೀಗೇಕೆ ಓಡಿಸಿದೆ?
ಹೇ ವಿಧಿಯೇ
ಕರ್ಣಕುಂಡಲ ಧರಿಸಿಯೂ
ಚಕ್ರವರ್ತಿಯ ಕರ್ಣಾಭರಣವಾಗುವ ಯೋಗ
ಮಾತ್ರವಾಯಿತೇ ಎನಗೆ?

ಹುಟ್ಟಿನಿಂದಲೇ ಅಲೆಯ ತೊಯ್ದಾಟಕ್ಕೆ
ಸಿಲುಕಿದ "ರಾಧೇಯ"ನಾಗಿ ನಾನು,
ನನ್ನ ಬದುಕಿನುದ್ದಕ್ಕೂ
ಗಟ್ಟಿಯಾಗಿ ನೆಟ್ಟಗೆ ನಿಲ್ಲಲೇ ಇಲ್ಲವಲ್ಲ!!

.......ಸುತ್ತಲೂ ಮೆತ್ತನೆಯ ರೇಶಿಮೆಯ ದುಕೂಲವಿತ್ತು
ವಜ್ರಾಭರಣಗಳಿತ್ತು ಮುಚ್ಚಿದಪೆಟ್ಟಿಗೆಯ ಒಳಗೆ
ಅದರೆ ಅಮ್ಮಾ,.....
ನದೀತಟದಲ್ಲಿ ಮರಳಿನಾಟವ ಆಡುವ ಮಕ್ಕಳಂತೆ
ಆಡಿ ನನ್ನ ಪಡೆದು
"ಭಾರತದ" ಗಂಗೆಗೆ ದೂಡಿಬಿಟ್ಟ ನಿನ್ನಲ್ಲಿರವಷ್ಟಾದರೂ
ಕರುಣೆಯಿತ್ತೇ?
ಕೇಳಿದ್ದೆ ನಾನು...
ಜಗತ್ತಲ್ಲಿ ಕೆಟ್ಟಮಕ್ಕಳು ಹುಟ್ಟಬಹುದು
"ಕುಮಾತಾ ನ ಭವತಿ" ಅಂತ
ನೀನೇನಾಗಿಹೋದೆ ಕುಂತೀ
ಜಗತ್ತಿನ ಮೊತ್ತಮೊದಲ ಕೆಟ್ಟತಾಯಿ
ಎಂಬ ಬಿರುದು ಹೊತ್ತುಕೊಂಡಲ್ಲೇ ಕುಂತು ಬಿಟ್ಟೆಯಲ್ಲೇ!!!

ಸೂತಪುತ್ರ,ಅಧಿರಥನ ಮಗ,
ವಸುಷೇಣನಾದರೂ
ಪರಶುರಾಮರ ಮಾನಸಪುತ್ರನಾದರೂ
ನನ್ನ ಅಂಧಕಾರವನ್ನು ಕಳೆಯಬಲ್ಲ ವಿದ್ಯೆ
ದೊರೆಯದೇ ಹೊಯಿತೇ..

ಅಂಗರಾಜ್ಯದ ಅಧಿಪತಿ
ಆಗಿ ತಲೆಗೆ ಕಿರೀಟ ಬಂದರೂ
ಜನರ ಕಿವಿಗಳಿಗೆ ಪ್ರೀಯನಾಗಿ
"ಕರ್ಣ"ನಾದರೂ
ಕಿರೀಟಿಗೆ ಸಮನಾಗಲಿಲ್ಲವಲ್ಲ!

ಅಂಬೆ ಅಂಬಾಲಿಕೆಯರ
ಅಜ್ಜ ಭೀಷ್ಮ
ಹೊತ್ತುತಂದಂತೆ
ಆವಂತಿಯ ಚಂದ್ರಮತಿ, ಭಾನುಮತಿ,ಸುರಸೆಯರ
ಸುಯೋಧನನಿಗೆ ತಂದೊಪ್ಪಿಸಿ ರಾಜನಿಷ್ಠೆಯ ಮೆರೆದರೂ
ದೊರೆಯಮನ್ನಣೆ ದೊರೆತುದಷ್ಟೇ..ಬಿಡಿ

ಯುದ್ಧರಂಗದವರೆಗೂ ಬೆಂಬಿಡದೆ ಬಂದ ಬಿರುದು
"ಮಹಾರಥಿ"
"ದಾನಶೂರ ಕರ್ಣ" ಎನ್ನುವುದೇ ಮುಳುವಾಯಿತೇ ಎನಗೆ?

ಒಳಹೊಕ್ಕರೆ ಹೊರಬರಲರಿಯದ
ಚಕ್ರವ್ಯೂಹದಲಿ ಅಭಿಮನ್ಯುವ ತರಿದ
ಅಪವಾದ ಬಂದದ್ದು
ನಿಜವಾದರೂ.....
ನಿಜಕ್ಕಾದರೂ,,
ಆ ಚಕ್ರಿಯಲ್ಲವೇ
ಮಹಾಭಾರತದ ಅನೂಹ್ಯ
ಚಕ್ರವ್ಯೂಹವ ಹೆಣೆದದ್ದು!
ಈ ಕರ್ಣನ ಬದುಕಿಗೆ?

ಹಾ!!
ವಿಧಿಯ ವಿಡಂಬನೆಯೆ!!

ಕುರುಕುಲ ಸಂಜಾತ,ಸೂರ್ಯಪುತ್ರ...
ಪಾಂಡವರಲ್ಲಿ ಹಿರಿಯ ನೀನು
ಎಂದ ಗೊಲ್ಲನಲ್ಲವೇ ನನ್ನ ಕೊಂದದ್ದು?
ಕೆಟ್ಟತಾಯಾಗಿಯೂ,ಇದ್ದ ನಾಚಿಕೆ ಮಾನ ಮರ್ಯಾದೆಯೆಲ್ಲವ ಬಿಟ್ಟು
"ತೊಟ್ಟಂಬ ತೊಡದಿರು"ಎಂಬ ವಚನವ ಪಡೆದು,
ನೀನಲ್ಲವೇ ನನ್ನ ಕೊಂದದ್ದು?

ಹೇಳು ಹಸ್ತಿನೆಯರಸಿ,ಲೊಕಮಾತೆ!!!

ಸಾರಥಿಯ ಕೈಗೂಸಾಗಿ ಬೆಳೆದೂ
ಸಾರಥಿ ಇಲ್ಲದೆ,
ರಕ್ತ ಮಾಂಸದ ಕೆಸರಲ್ಲಿ ಹೂತು ಹೋದ
ರಥಗಾಲಿಯ ಬರಿಕೈಯಿಂದ,ಓರ್ವನೇ
(ಕವಚವ ದಾನವಿತ್ತು,)ಎತ್ತುತ್ತಿರುವಾಗ
ಯುದ್ಧ ನಿಯಮವ ಮುರಿದು
ಹೊಡಿ ಕರ್ಣನ ಎದೆಗೆ ಎಂದದ್ದು ಯಾವ ನ್ಯಾಯ ಹೇಳು?

ಕುಂತಿಯಿಂದ
ಕೃಷ್ಣನವರೇಗೆ
ಎಲ್ಲರೂ ಬಳಸಿ ಎಸೆದ
ಈ ಕರ್ಣನ ಬದುಕು
ಯಾಕೆ,ಯಾರಿಗೆ
..........ಆಹುತಿ ಹೇಳಿ...

---------------------------

17 comments:

ವಿ.ಆರ್.ಭಟ್ said...

ಕರ್ಣನ ’ಆಹುತಿ’ ಚೆನ್ನಾಗಿದೆ ! ಒಳ್ಳೆಯ ಶಬ್ಧ ಪ್ರಯೋಗ , ಗುಡ್

ಸಿಮೆಂಟು ಮರಳಿನ ಮಧ್ಯೆ said...

ವೆಂಕಟಕೃಷ್ಣರವರೆ..

ನಿಮ್ಮ ಕವನ ಇಷ್ಟವಾಯಿತು..

ಭೀಷ್ಮ..
ಕರ್ಣ ನನಗೆ ಬಹಳ ಕಾಡಿದ ಪಾತ್ರಗಳು...

ಎಲ್ಲವೂ ಇದ್ದು..
ಬಂಧು..
ಬಳಗ ಇದ್ದರೂ...
ಏನೂ ಇಲ್ಲದಂತೆ ಬದುಕಿದ..
ಅಂಥಹ ಬದುಕಿಗೆ..

ಉದಾಹರಣೆ.. ಆ ಪಾತ್ರಗಳು...

ವೈರಾಗ್ಯದಲ್ಲೂ.. ಸಾರ್ಥಕತೆ ಕಂಡವರು..

ಅಭಿನಂದನೆಗಳು...

ಶಾಂತಲಾ ಭಂಡಿ said...

ವೆಂಕಟಕೃಷ್ಣ ಅವರೆ...

"ನದೀತಟದಲ್ಲಿ ಮರಳಿನಾಟವ ಆಡುವ ಮಕ್ಕಳಂತೆ
ಆಡಿ ನನ್ನ ಪಡೆದು
"ಭಾರತದ" ಗಂಗೆಗೆ ದೂಡಿಬಿಟ್ಟ ನಿನ್ನಲ್ಲಿರವಷ್ಟಾದರೂ
ಕರುಣೆಯಿತ್ತೇ?
ಕೇಳಿದ್ದೆ ನಾನು...
ಜಗತ್ತಲ್ಲಿ ಕೆಟ್ಟಮಕ್ಕಳು ಹುಟ್ಟಬಹುದು
"ಕುಮಾತಾ ನ ಭವತಿ" ಅಂತ
ನೀನೇನಾಗಿಹೋದೆ ಕುಂತೀ
ಜಗತ್ತಿನ ಮೊತ್ತಮೊದಲ ಕೆಟ್ಟತಾಯಿ
ಎಂಬ ಬಿರುದು ಹೊತ್ತುಕೊಂಡಲ್ಲೇ ಕುಂತು ಬಿಟ್ಟೆಯಲ್ಲೇ!!!"

ಎಂಥ ಚಂದದ ಸಾಲುಗಳಿವು.
ಪ್ರತಿ ಸಾಲುಗಳೂ ಇಷ್ಟವಾದ್ವು.

geete said...

ಮನಸ್ಸಿನ ತೊಯ್ದಾಟವನ್ನ ಬಹಳ ಚೆನ್ನಾಗಿ ಶಬ್ದಗಳಲ್ಲಿ ಸೆರೆ ಹಿಡಿದಿದ್ದೀರ, ಬಹಳ ಚೆನ್ನಾಗಿ ಮೂಡಿ ಬಂದಿದೆ.

'ಮಹಾಭಾರತ' ಹೆಸರೇ ಹೇಳುವಂತೆ, ಪಾತ್ರಗಳ ಮೂಲಕ ಭಾರತ ವಾಸಿಗಳ ಜೀವನವನ್ನ ಪ್ರತಿಬಿಮ್ಬಿಸುತ್ತೆ, ಪ್ರತಿಯೊಂದು ಪಾತ್ರಕ್ಕೂ ಹಿನ್ನಲೆ ಇರುವುದು ಅದರ ವೈಶಿಷ್ಟ್ಯ. ಹಾಗಾಗಿ ಕರ್ಣನ ಆಹುತಿ ಪೂರ್ವ ನಿರ್ಧಾರಿತ ಅನ್ನುವ ಅರಿವು ಮನಸ್ಸಿಗೆ ಸ್ವಲ್ಪ ಮಟ್ಟಿನ ಸ್ವಾಂತನನೀಡುತ್ತೆ.

Venkatakrishna.K.K. said...

ಕರ್ಣ ಓರ್ವ ದುರಂತ ನಾಯಕ.
ಅದ್ಯಾಕೆ ವ್ಯಾಸರು ಹೀಗೆ ಮಾಡಿದರೊ ಗೊತ್ತಿಲ್ಲ.
ಸೂರ್ಯನ ಮಗನನ್ನೇ ಬಲಿ ಕೊಟ್ಟರಲ್ಲ!!!

ಎಚ್. ಆನಂದರಾಮ ಶಾಸ್ತ್ರೀ said...

ಬಹಳ ಅಪರೂಪಕ್ಕೆ ಬ್ಲಾಗೊಂದು ನಿಜವಾದ ಕವನಗಳಿಂದ ಶೋಭಿಸುತ್ತಿದೆ.

ಮನಮುಕ್ತಾ said...

ಚಿ೦ತನಯುಕ್ತ ಕವನ..ಕು೦ತಿಯ ಪಾತ್ರವನ್ನು ವಿಶ್ಲೇಷಿಸಿದ ರೀತಿ, ಕರ್ಣನ ಬದುಕಿನ ಆಹುತಿ.. ಸು೦ದರವಾಗಿ ಮೂಡಿಬ೦ದಿದೆ.
ಕವನ ಇಷ್ಟವಾಯ್ತು.

kuusu Muliyala said...

ಕೆ.ಕೆ.ಯವರೆ ನನ್ನಷ್ಟೇ ಕರ್ಣ ನಿಮ್ಮನ್ನೂ ಕಾಡಿದ್ದನೆ೦ದಾಯಿತು.ಮತ್ತೂ೦ದಿದೆ ನರನು ನಾರಾಯಣನಲ್ಲಿ ಲೀನವಾದದ್ದಲ್ಲವೇ? ನೆನಪಿಸಿಕೊಳ್ಳಿ ದ೦ಭೋಧ್ಭವನನ್ನೊಮ್ಮೆ.ಹೀಗೆಯೇ ನನಗೆ ಕಾದಿದ್ದನ್ನು feb 2.2010 ರ೦ದು ಪ್ರಕಟಿಸಿದ್ದೆ.http://muliyala.blogspot.com ಲ್ಲಿ

ಸ೦ಗತ-ಅಸ್ತ೦ಗತ

ಅಸ್ತಮಿಸುವೆನೆ,
ಭಾನುತೇಜ.!
ಅರ್ಪಿಸುವೆನೆ,
ಜೀವ....ತೇದು,
ಮಾತಿಗೆ,
ಕೊಟ್ಟ ನುಡಿಗೆ.

ಧರ್ಮ.......,
ಇರುವುದೇ ಹಾಗೆ,
ನೋಡುವ ರೀತಿಯಲ್ಲಿ,
ಯೋಚನೆಯಾಚೆಗೆ,..?

ಮಮತೆಯೆ೦ಬುದು ಸುಳ್ಳು,
ತಾಯಿಯೇ ಕೈಯೊಡ್ಡಿದರೆ,
ಮಾತಾಯಿತೇ ಮುಳ್ಳು.!
ಜಗವೆಲ್ಲಾ ಸುಳ್ಳು..!

ಸ೦ಸ್ಥಾಪಿಸುವನೇ ಧರ್ಮ..,
ರಾಜ್ಯವನು,
ಬ೦ದುಗಳ ಗೋರಿಯಲಿ...!

ಯಾರೋ ಆಡುವ,
ಆಟಕ್ಕೆ
ದಾಳಗಳಾಗಬೇಕಿತ್ತೇ...?

ನೆತ್ತರ ಹೊಳೆಯಲ್ಲಿ
ನೀರ
ಹುಡುಕುವದೆ೦ತು..!

ರುಧಿರನೇತ್ರನು
ಕಣ್ಮುಚ್ಚಿ ಕುಳಿತಿಹನೆ ?
ಧರ್ಮ....,ಕೆಡದಿರಲೆ೦ದು.

ಉಳಿಯುವುದು
ಖಾಲಿ ಖಾಲಿ..,
ಗೋಳು.. ಗೋಳು!

ಧರ್ಮ...,
ಹೇಳುವರಾರು......!?

’ಕೃಷ್ಣಸ್ಯ ಭಗವಾನ್ ಸ್ವಯ೦’

Venkatakrishna.K.K. said...

ಪುರಾಣದ ಮರ್ಮವಿರುವುದೇ ಇಲ್ಲಿ.
ಸುಳಿಸುತ್ತಿ ಗೊಜಲು ಗೊಜಲಾಗುವ ಅಥವಾ ಕಥೆಯನ್ನು ಹೆಣೆದ ರೀತಿಯಲ್ಲಿ.
ಅವು ನಮ್ಮನ್ನು ಯೋಚನೆಗೆ ಹಚ್ಚುವ ಪರಿಯಲ್ಲಿ.
ಇವುಗಳ ಒಳಗುಟ್ಟು ಕೂಡಾ ಅವರವರ ಭಾವಕ್ಕೆ...
ಎಷ್ಟು ಜಟಿಲವೆಂದರೂ,ಅಷ್ಟೇ ಅವಕಾಶಗಳಿರುವ ಕಾವ್ಯಶಿಲ್ಪದಲ್ಲಿ!
ಜೀವನವನ್ನು ಅವು ಪದರು ಪದರಾಗಿ ವಿಶ್ಲೇಷಿಸುವ, ಜಾಲಾಡುವ ಚೆಂದ..ಅದರಲ್ಲಿರುವ ಆನಂದ ಉಂಡವನೇ ಬಲ್ಲ.
ಪುರಾಣವನ್ನು ಎಷ್ಟೆಲ್ಲ ದೃಸ್ಠಿಕೋನದಿಂದ ನೊಡ ಬಹುದಲ್ಲವೇ?
ನಮ್ಮ ದೇವರ ಕಲ್ಪನೆಯಂತೆ!
ಅವನನ್ನು ಏಕವಚನದಿಂದ ಕರೆಯಬಹುದು,ಜಗಳಾಡಬಹುದು,ಗೋಗರೆಯಬಹುದು,ಬೇಡಿಕೊಳ್ಳಬಹುದು,
ಮನದಂತರಾಳವನ್ನು ತೋಡಿಕೊಳ್ಳಬಹುದು..ಎಷ್ಟೊಂದು ಸಲೀಸು!!!
ಸುಬ್ರಹ್ಮಣ್ಯರೇ,
ನೀವು ಸಹಸ್ರಕವಚನನ್ನು ಕಂಡ ರೀತಿಯೂ ಒಂದು ಹೊಸಮಗ್ಗುಲ ಶೋಧನೆ,ಚಿಂತನೆ.ಚೆನ್ನಾಗಿ ಮೂಡಿಬಂದಿದೆ.
ಅಂದಹಾಗೆ ಕೆಂಡಸಂಪಿಗೆಯಲ್ಲಿ ತೋಳ್ಪಾಡಿಯವರ ಭಾಗವತ ಪುರಾಣದ ಕಥಾಮಾಲಿಕೆ ಆರಂಭವಾಗಿದೆ.ಚೆನ್ನಾಗಿದೆ ಓದಿ.

Venkatakrishna.K.K. said...

ನನ್ನ ಬ್ಲಾಗ್ ಇಷ್ಟಪಟ್ಟ,
ಕವನಗಳನ್ನು ಮೆಚ್ಚಿಕೊಂಡ ಎಲ್ಲ ಸ್ನೇಹಿತ,ಸ್ನೇಹಿತೆಯರಿಗೆ
ಧನ್ಯವಾದಗಳು.
ಇಲ್ಲಿ ಬರೆಯದೆ,ನೇರವಾಗಿ ಮೈಲ್ ಮಾಡಿದವರಿಗೂ,ವಿಮರ್ಷೆ ಮಾಡಿದವರಿಗೂ
ವಂದನೆಗಳು.

ಸಾಗರದಾಚೆಯ ಇಂಚರ said...

ಸರ್
ನಿಮ್ಮ ಕವನ ಬಹಳ ಇಷ್ಟವಾಯಿತು
ಆ ಸಂಭಾಷಣೆಯೇ ಹಾಗೆ
ಮಹಾಭಾರತದ ಆ ಪಾತ್ರಗಳು ಮತ್ತು ಅವುಗಳ ಒಳಗಿನ ಜೀವ ಎಲ್ಲವೂ ಮನಸ್ಸಿಗೆ
ತುಂಬಾ ನಾಟುತ್ತವೆ

PARAANJAPE K.N. said...

ವೆ೦ಕಟ ಕೃಷ್ಣ ರೇ
ಕರ್ಣನನ್ನು, ಅವನ ಮನದ ಅಳಲನ್ನು ಅನಾವರಣಗೊಳಿಸುವ ನೆಪದಲ್ಲಿ ಸಮಗ್ರವಾಗಿ ಮಹಾಭಾರತದ ಮುಖ್ಯ ಪಾತ್ರ ಗಳನ್ನು ನಿಮ್ಮ ಕವನದ ಮೂಲಕ ತಟ್ಟಿದ್ದೀರಿ. ಉತ್ತಮ ಕವನ

ಜಲನಯನ said...

ವಿ.ಕೆ.ಸರ್..ಪೌರಾಣಿಕ ಪಾತ್ರಗಳ ಒಳಹೊಕ್ಕು ಅವರ ಮನದಾಳದ ದ್ವಂದ್ವಗಳನ್ನು ಬಹಳ ಅರ್ಥಪೂರ್ಣವಾಗಿ ಕವನದ ರೂಪದಲ್ಲಿ ನಮ್ಮ ಮುಂದೆ ಇಟ್ಟಿದ್ದೀರಿ..ನನಗೂ ಬಹಳ ಮೆಚ್ಚುಗೆಯಾದ ಪಾತ್ರ ಕರ್ಣನದು...ಯಾರದೋ ತಪ್ಪಿನ ಅಥವಾ ಪ್ರಯೋಗ (ಮುನಿಯ ವರ ನಿಜವೋ ಎಂದು ಪರೀಕ್ಷಿಸುವುದು ತಪ್ಪು ಎಂದೇ ಪ್ರತಿಪಾದಿಸುವ)ದ ಫಲವಾಗಿ ಹುಟ್ಟಿ ತನ್ನ ಜೀವನವಿಡೀ ಶಾಪಗ್ರಸ್ತನಾದರೂ ಪ್ರಜ್ವಲಿಸಿದ ವ್ಯಕ್ಟಿತ್ವ....ಧನ, ಋಣ ಗಳ ಮಧ್ಯೆ ಹಂಚಿಹೋದ ಪಾತ್ರ ಅದು.....ಧನ್ಯವಾದ.

Venkatakrishna.K.K. said...

ಪರಾಂಜಪೆ ಹಾಗೂ ಜಲನಯನ ಸರ್....,
ವಂದನೆಗಳು.

Venkatakrishna.K.K. said...

ಗುರುಮೂರ್ತಿ ಸರ್....
ವಂದನೆಗಳು..

ಗಿರೀಶ್ ರಾವ್, ಎಚ್ (ಜೋಗಿ) said...

ನಿಮ್ಮ ಕವಿತೆ ಕರ್ಣಚರಿತೆಯಂತಿದೆ. ಕರ್ಣ ಬದುಕಿನ ಅಷ್ಟೂ ಚಿತ್ರಗಳನ್ನೂ ಇಷ್ಟರಲ್ಲೇ ಕಟ್ಟಿಕೊಟ್ಟಿದ್ದೀರಿ. ಖುಷಿಯಾಯಿತು
ಜೋಗಿ

Venkatakrishna.K.K. said...

ಧನ್ಯವಾದಗಳು..
ಜೋಗಿ ಸರ್..

Post a Comment