
ನೋವೇ ದೊರೆತರು ನಿನಗೆ
ಮಾಡಿಕೊಳ್ಳ ಬೇಕಲ್ಲ ಅದನ್ನು ಮುತ್ತಿನ ನತ್ತು.
ಸುಖದ ಮುತ್ತು.
ಶರೀರಕ್ಕಾದರೆ ನೋವು ಮಾಯದೇ
ದಿನ,ದಿನಗಳಲ್ಲಿ,ತಿಂಗಳುಗಳಲ್ಲಿ.
ಒಂದಷ್ಟು ಸಮಯದಲ್ಲಿ
ಆಗದದು ಸ್ವಾತಿ ಹನಿ.
ದೊರೆಯದು ಕೆನೆಕಟ್ಟಿ ಮುತ್ತು!
ಮನದೊಳಗೆ ಇಳಿಯ ಬೇಕು ಸುಳಿ ಸುತ್ತಿ ನೋವು.
ಘಟನೆಗಳು,ಸಂಗತಿಗಳು
ಭಾವನೆಗಳ ಭಾವಲೋಕಕ್ಕೆ ಕನ್ನವಿಕ್ಕಿ
ಕೊರೆಯಲಾರಂಬಿಸಿದರೆ
ತಿರುಳ ಕೊರೆವ ಮರಿದುಂಬಿಗಳು.
ಕದತೆರೆಯದಿದ್ದರೆ
ಮನದೊಳಗೆ
ಕೆಂಪುಗಂಬಳಿ ಹಾಸಿ
ಕರೆಯದಿದ್ದರೆ ಒಳಗೆ
ಸುತ್ತಬೇಕಷ್ಟೆ ತಾನೆ ಹೊರಗೆ ಸುತ್ತು ಪೌಳಿಯಲ್ಲಿ?
ಸುತ್ತ ಸುತ್ತಲಿ ಬಿಡು ಅದರ ಜಾಡು ಅದೇಹಿಡಿದು.
ಎಂದರಾಗದು ಗೆಳೆಯಾ
ಮೊಹಗೊಂಡು ಅದರ ಸ್ವರ ಮಾಧುರ್ಯಕ್ಕೆ,ಮಧುರಾಲಾಪಕ್ಕೆ
ಶೃತಿ ಸೇರಿಸಿದೆಯಾದರೆ ಸಾಕು
ಮತ್ತೆ ಅದು ಲಕ್ಶ್ಮಣರೇಖೆ ದಾಟಿದ ಸನ್ಯಾಸಿಯೇ ಸರಿ.
ಸ್ವರ್ಣ ಲಂಕೆಯಲ್ಲೂ
ಶೋಧಿಸು ಮೂಲವನು
ಕಾರ್ಯ ಕಾರಣ ಕಾರಕವನು
ಆನಂದಿಸು ಮರಿದುಂಭಿಯ
ಮಧುರ ಮರುಳ ಮೊರೆತವನು
ಸಡಿಲಿಸು ಪಟ್ಟು, ಬಿಟ್ಟು ಬಿಡು
ನೋವು ತಿನ್ನ ಬೇಕೆನ್ನುವ ಹುಚ್ಚು
ಅನುಭವಿಸು
ಕುಣಿ,ಕುಣಿಸು
ಅದರ ತಾಳಕ್ಕೆ ನೀನು,ನಿನ್ನ ತಾಳಕ್ಕೆ ಅದು.
ಆಗ
ಅದೊ
ನೋವಿನಾಳದ
ಸಮುದ್ರದಲ್ಲೂ ಸುಖದ ಮತ್ತು
ಅಲ್ಲ ..ಮುತ್ತು!
ಮಾಡಿಕೊ ನತ್ತು!
------------------