Saturday, January 16, 2010




ನನ್ನ ಮಾಲಿಕನೇನೊ ನೀನು?

ಇದುವರೆಗೆ ಕಂಡಿಲ್ಲ,ನಿನ್ನ ನುಡಿ ಕೇಳಿಲ್ಲ!

ಇಲ್ಲಿ ಎಲ್ಲ
ಸ್ವಯಂಘೋಷಿತ ಮೇಸ್ತ್ರಿಗಳದ್ದೇ ಆಟ.

ಕೆಲಸ ಹೇಳುವುದೇನು? ಹೊರೆ ಹೊರಿಸುವುದೇನು?

ನನ್ನ ಪಾಡು
ಅಗಸನ ಅನುಚರನಿಗಿಂತಲೂ ಕಡೆಯಾಯಿತಲ್ಲ;

ಡೊಗ್ಗು ಸಲಾಮು ಹೊಡೆದು
ವಂಧಿಮಾಗಧನಾಗಿ ನಾನಿಲ್ಲಿ ಬಂಧಿ,
ನೀನೇಕೆ ಅಲ್ಲಿಯೇ ನಿಂದಿ?

ಬೇಡ ದೊರೆಯೇ ಬೇಡ..
ದೂರದೂರಿನ ಮಾಲಕನಾಗಿ
ನನ್ನ
ಅವರಿವರ ತಾಳಕ್ಕೆ
ಕುಣಿಸ ಬೇಡ.ನೀ ಅವಿತು ನೋಡಬೇಡ.

ಒಮ್ಮೆ ಬಂದು ನೋಡಿಲ್ಲಿ ನನ್ನ ಅವಸ್ಥೆ

ಈ ಬುದ್ಧಿವಂತ ಜನ ನಾಯಕರ,
ಮಠ ಮಂದಿರದ ಠಕ್ಕು ಸ್ವಾಮಿಗಳ,
ಬೈಠಕ್ಕು ಮಾಡುವ ಉಗ್ರ ದೇಶ ಪ್ರೇಮಿಗಳ,
ಅತ್ಯುಗ್ರ ಧರ್ಮಾಭಿಮಾನಿಗಳ,
ಹಿಂಡು ಹಿಂಡಾಗಿ ಬಂದು
ಎತ್ತೆತ್ತಲೋ ಒಯ್ಯುವ
ಅಭಿಮಾನಿ ದೇವತೆಗಳ,
ಕೈಯಲ್ಲಿ ಸಿಕ್ಕಿ ನರಳುತ್ತಿರುವೆ ತಂದೆಯೇ..

ಹಕ್ಕು ಕರ್ತವ್ಯಗಳ ಹೆಸರಲ್ಲಿ
ನೀತಿ ಅನೀತಿಗಳ ಬಲೆಯಲ್ಲಿ ಸುತ್ತಿ
ಒತ್ತಿ,
ಉಸಿರುಗಟ್ಟಿಸಿ, ಸಮಾಧಿಕಟ್ಟಿಸಿ,ಹುತಾತ್ಮನನ್ನಾಗಿಸಿ,
ವೀರಗಲ್ಲಲ್ಲಿ ಹೆಸರ ಬರೆಯುತ್ತಿರುವರಯ್ಯೋ
ದನಿಯೇ, ನನ್ನ ದನಿ ಕೇಳುತ್ತಿಲ್ಲವೇ?...

ಕಣ್ಣನಿತ್ತೂ ನೀ ನೋಡದ
ಕಿವಿಯಿತ್ತೂ ನೀ ಕೇಳದ
ನುಡಿಯಿತ್ತೂ ನೀ ನುಡಿಯದ
ಬಾಯಿಯನಿತ್ತೂ ನೀ ಮಾತನಾಡದ
ನೀನೂ ಒಬ್ಬ ಮಾಲಕನೇನೋ?

ದೂರದೂರಲ್ಲಿ ಕುಳಿತು
ನನ್ನ ಜೀತಕ್ಕಿಕ್ಕ ಬೇಡ.

ಬಿಡುಗಡೆಯ ಕರುಣಿಸೋ
ಇಲ್ಲಾ..
ನನ್ನನ್ನೇ
ನಿನ್ನಂತೆ ಒಡೆಯನನ್ನಾಗಿಸೋ..

ದೂರದೂರಿನ ಮಾಲೀಕನೇ
ಬಾರಯ್ಯ ತಂದೇ ನನ್ನ ಬಳಿಗೆ.
ಏನಯ್ಯ ತಂದೇ? ನನ್ನ ಬಾಳಿಗೆ?
ಎನ್ನುವಂತಾಗಿಸ ಬೇಡವೋ ದೊರೆಯೇ..

ನನ್ನ ಮಾಲೀಕ ನೀನೇ ಏನೋ???
-------------

13 comments:

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ನಿಮ್ಮ ನಿರೂಪಣೆ ಓದುಗನನ್ನು ಚಿ೦ತನೆಗೆ ಓಯ್ಯುತ್ತದೆ,
ಯಾರು ಯಾರ‍ ಮಾಲೀಕನೊ....!?
ಸು೦ದರವಾಗಿದೆ.,ಗ೦ಭೀರವಾಗಿದೆ.
ಅಭಿನ೦ದನೆಗಳು

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

good

Subrahmanya said...

ಚೆನ್ನಾಗಿದೆ ಕವನ....

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಧನ್ಯವಾದಗಳು..
ಮುಳಿಯಾಲ ಕೂಸಿಂಗೆ
ಹಾಗೂ
ಸುಬ್ರಮಣ್ಯ ಭಟ್ರಿಂಗೆ..

Unknown said...

Chennaagide...

ಸಾಗರದಾಚೆಯ ಇಂಚರ said...

ತುಂಬಾ ಚೆನ್ನಾಗಿದೆ
ಒಳ್ಳೆಯ ಕವನ

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ರವಿಯವರೆ,
ಹಾಗೂ
ಹೆಗಡೆಯವರೆ,
ನಿಮ್ಮಿಬ್ಬರಿಗೂ ಧನ್ಯವಾದಗಳು ಸಾರ್..

Nisha said...

Chendada Kavana.

Narayan Bhat said...

ದೂರದೂರಲ್ಲಿ ಕುಳಿತು ನನ್ನ ಜೀತಕ್ಕಿಡಬೇಡ .. ಕಲ್ಪನೆ ತುಂಬಾ ಚೆನಾಗಿದೆ.. ಹಾಗೆಯೇ ಕವನ ಕೂಡಾ.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ನಿಶಾ ಮತ್ತು ನಾರಾಯಣ ಭಟ್ರಿಗೂ.
ವಂದನೆಗಳು.ನನ್ನ ಉಳಿದ ಬರೆಹಗಳನ್ನೂ ಓದಿ,
ಅಭಿಪ್ರಾಯ ತಿಳಿಸಿ.

Unknown said...

ಇಡೀ ಜಗವನ್ನೇ ಕಾಯುತ್ತಿದ್ದಾನೆ ಎಂಬ ಪುರಾತನ ನಂಬಿಕೆಗೆ ಪಾತ್ರವಾಗಿರುವ ಮಾಲಿಕನಲ್ಲಿ ಈ ತರಹದ ಒಂದು ಆಪ್ತ ನಿವೇದನೆಯೂ ಸಾಧ್ಯ ಎಂಬ ಹೊಸ ಸಾಧ್ಯತೆ ಕಂಡು ಬೆರಗಾಯಿತು ಸರ್, ದೂರದೂರಲ್ಲಿ ಕುಳಿತು ನನ್ನನ್ನು ಹೀಗೆ ಜೀತಕ್ಕಿಡುವ ಬದಲು ನನ್ನನ್ನೂ ನಿನ್ನಂತೆ ಒಡೆಯನಾಗಿಸು ಎನ್ನುವುದು ಎಷ್ಟು ದಿಟ್ಟ, ಹಾಗೆಯೇ ಪ್ರಾಮಾಣಿಕ ಬೇಡಿಕೆಯಲ್ಲವೇ ಅಂಥ ಅನ್ನಿಸಿತು.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ವಂದನೆಗಳು..ಕಾವ್ಯಾ.

Unknown said...

ತುಂಬಾ ಚೆನ್ನಾಗಿದೆ ಧನ್ಯವಾದಗಳುತುಂಬಾ ಚೆನ್ನಾಗಿದೆ ಧನ್ಯವಾದಗಳು

Post a Comment